ಬೈಕ್ ಅಪಘಾತ: ಗಂಭೀರ ಗಾಯಗೊಂಡ ಬಾಲಕಿಯ ಚಿಕಿತ್ಸೆಗಾಗಿ ಹಣ ಸಂಗ್ರಹಿಸಿ ನೀಡಿ ಮಾದರಿಯಾದ ಬಸ್ ನೌಕರರು
ಬದಿಯಡ್ಕ: ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಬಸ್ ಕಂಡಕ್ಟರ್ನ ಮಗಳ ಚಿಕಿತ್ಸೆಗೆ ಅಗತ್ಯವುಳ್ಳ ಹಣವನ್ನು ಬದಿಯಡ್ಕದ ‘ಪ್ರೈಡ್’ ಬಸ್ ಕಾರ್ಮಿಕರು ಸಂಗ್ರಹಿಸಿ ನೀಡಿ ಮಾದರಿಯಾದರು.
ಮಾವಿನಕಟ್ಟೆ ಕೋಳಾರಿಯಡ್ಕ ನಿವಾಸಿ, ಬದಿಯಡ್ಕ ಮೂಲಕ ಸಂಚರಿಸುವ ಗಜಾನನ ಬಸ್ನ ಕಂಡಕ್ಟರ್ ದಿನೇಶ್ ಎಂಬವರ ಪುತ್ರಿ ಶಿವನ್ಯ (3)ಳ ಚಿಕಿತ್ಸೆಗಾಗಿ ಬಸ್ ನೌಕರರು 1 ಲಕ್ಷದ 150 ರೂಪಾಯಿಗಳನ್ನು ಸಂಗ್ರಹಿಸಿ ನೀಡಿದರು.
ಈ ತಿಂಗಳ 10ರಂದು ರಾತ್ರಿ ದಿನೇಶ್ ಪತ್ನಿ ಅನುಷ (25), ಪುತ್ರಿ ಶಿವನ್ಯರ ಜೊತೆಗೆ ಬೈಕ್ನಲ್ಲಿ ಪಿಲಾಂಕಟ್ಟೆಯ ಸ್ನೇಹಿತನ ಮನೆಗೆ ತೆರಳುತ್ತಿದ್ದಾಗ ಉಬ್ರಂಗಳದಲ್ಲಿ ಬೈಕ್ ಅಪಘಾತಕ್ಕೀಡಾಗಿತ್ತು. ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಬೈಕ್ ಹೊಂಡಕ್ಕೆ ಬಿದ್ದಿತ್ತು. ಈ ಅಪಘಾತದಲ್ಲಿ ಗಂಭೀರ ಗಾಯಗೊಂಡ ಅನುಷ ಆಸ್ಪತ್ರೆಗೆ ತಲುಪುತ್ತಿದ್ದಂತೆ ಮೃತಪಟ್ಟಿದ್ದರು. ದಿನೇಶ್ರನ್ನು ಚೆಂಗಳದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಗಂಭೀರ ಗಾಯಗೊಂಡ ಪುತ್ರಿ ಶಿವನ್ಯಳನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶಿವನ್ಯಳ ಚಿಕಿತ್ಸೆಗೆ ಒಂದು ಲಕ್ಷ ರೂಪಾಯಿ ಬೇಕಾಗಿ ಬರಲಿದೆ ಎಂದು ತಿಳಿಸಲಾಗಿದೆ. ಇದನ್ನು ತಿಳಿದ ಬದಿಯಡ್ಕ ವಲಯದ ‘ಪ್ರೈಡ್’ ಬಸ್ ನೌಕರರು ಅವರ ಸ್ನೇಹಿತರು ಪ್ರೈಡ್ ಸಂಘಟನೆಯ ವಾಟ್ಸಪ್ ಗ್ರೂಪ್ನ ಮೂಲಕ ಸಂಗ್ರಹಿಸಿದರು. ಆ ಮೊತ್ತವನ್ನು ಬದಿಯಡ್ಕ ಠಾಣೆಯ ಸಿ.ಐ. ಸುಧೀರ್, ಎಸ್.ಐ. ಅನ್ಸಾರ್ರ ನೇತೃತ್ವದಲ್ಲಿ ದಿನೇಶ್ರಿಗೆ ಹಸ್ತಾಂತರಿಸಲಾಯಿತು. ಪ್ರೈಡ್ ಸಂಘಟನೆಯ ಅಧ್ಯಕ್ಷ ಹಾರಿಸ್, ಕಾರ್ಯದರ್ಶಿ ನಾಗರಾಜ್, ಉಪಾಧ್ಯಕ್ಷ ಅಶ್ರಫ್ ಸಿಎನ್ಎನ್, ರಾಜನ್ ಬಿಲಾಲ್, ಮುಸ್ತಫ ಪೆರ್ಲ, ದಿನೇಶನ್ ಎಡನೀರು, ಮುಸ್ತಫ ತೆಕ್ಕಿಲ್, ಶಾಹಿದ್ ಬಿಲಾಲ್, ಚಂದ್ರನ್ ನಾರಂಪಾಡಿ, ಮುಹಮ್ಮದ್ ಪುತ್ರಕಳ ಮೊದಲಾದವರು ಉಪಸ್ಥಿತರಿದ್ದರು.