ಮಂಜೇಶ್ವರದಲ್ಲಿ ಬೆಂಕಿ ಅನಾಹುತ: ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದ ಐದು ವಾಹನಗಳು ಉರಿದು ನಾಶ
ಮಂಜೇಶ್ವರ: ಮಂಜೇಶ್ವರದಲ್ಲಿ ನಿನ್ನೆ ಬೆಳಿಗ್ಗೆ ಬೆಂಕಿ ಅನಾಹುತ ಸಂಭವಿಸಿದ್ದು, ಇದರಿಂದ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದ ಐದು ವಾಹನಗಳು ಉರಿದು ನಾಶಗೊಂಡಿವೆ. ವಿಷಯ ತಿಳಿದು ಉಪ್ಪಳದಿಂದ ತಲಪಿದ ಅಗ್ನಿಶಾಮಕದಳ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಿಂದ ಇನ್ನಷ್ಟು ನಾಶನಷ್ಟವನ್ನು ತಪ್ಪಿಸಲು ಸಾಧ್ಯವಾಯಿತು.
ಮಂಜೇಶ್ವರ ಪೊಲೀಸ್ ಠಾಣೆ ಪರಿಸರದ ಖಾಸಗಿ ಹಿತ್ತಿಲಿನಲ್ಲಿ ನಿನ್ನೆ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಅದು ಇನ್ನಷ್ಟು ವಿಸ್ತರಿಸಿದ್ದು, ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಕಸ್ಟಡಿಗೆ ತೆಗೆದು ನಿಲ್ಲಿಸಿದ್ದ ವಾಹನಗಳತ್ತ ತಲುಪಿದೆ. ಇದರಿಂದ ನಾಲ್ಕು ಆಟೋರಿಕ್ಷಾ ಹಾಗೂ ಒಂದು ಓಮ್ನಿ ವ್ಯಾನ್ ಪೂರ್ಣವಾಗಿ ಉರಿದು ನಾಶಗೊಂಡಿದೆ. ಬೆಂಕಿ ಹತ್ತಿಕೊಂಡ ವಿಷಯ ತಿಳಿದು ಉಪ್ಪಳದಿಂದ ಅಗ್ನಿ ಶಾಮಕದಳ ತಲುಪಿ ನಂದಿಸುವ ಕಾರ್ಯ ಆರಂಭಿಸಿದೆ. ಆದರೆ ಅಷ್ಟರೊಳಗೆ ಐದು ವಾಹನಗಳು ಉರಿದು ನಾಶ ಗೊಂಡಿವೆ. ಬೆಂಕಿಯನ್ನು ಸಕಾಲದಲ್ಲಿ ಹತೋಟಿಗೆ ತರಲು ಅಗ್ನಿಶಾಮಕದಳಕ್ಕೆ ಸಾಧ್ಯವಾದುದರಿಂದ ಹೆಚ್ಚಿನ ನಾಶನಷ್ಟ ತಪ್ಪಿದೆ. ಬೆಂಕಿ ಹತ್ತಿಕೊಂಡ ಹಿತ್ತಿಲಿನ ಸಮೀಪದಲ್ಲಿ ಕಾಲುದಾರಿಯಿದೆ. ಇದರಿಂದ ಯಾರೋ ಸೇದಿ ಎಸೆದ ಬೀಡಿ ಅಥವಾ ಸಿಗರೇಟಿನಿಂದ ಬೆಂಕಿ ಹತ್ತಿಕೊಂಡಿರಬಹು ದೆಂದು ಅಂದಾಜಿಸಲಾಗಿದೆ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಸ್ವಯಂ ಕೇಸು ದಾಖಲಿಸಿಕೊಂಡಿದ್ದಾರೆ.