ಮಚ್ಚಂಪಾಡಿಯ ಮನೆಯಿಂದ ಕಳವುಗೈದ ಇನ್ನೋರ್ವ ಆರೋಪಿ ಕಸ್ಟಡಿಗೆ
ಮಂಜೇಶ್ವರ: ಮಚ್ಚಂಪಾಡಿಯ ಗಲ್ಫ್ ಉದ್ಯೋಗಿ ಮನೆಯಿಂದ ನಗ-ನಗದು ಕಳವು ನಡೆಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಮಂಗಳೂರು ಉಳಾಯಿಬೆಟ್ಟು ನಿವಾಸಿ ಮುಹಮ್ಮದ್ ಅರ್ಫಾಸ್ (19) ಎಂಬಾತನನ್ನು ಕಸ್ಟಡಿಗೆ ತೆಗೆಯಲಾಗಿದೆ. ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಜೈಲಿನಲ್ಲಿದ್ದ ಈತನನ್ನು ಮಂಜೇಶ್ವರ ಸಿಐ ರಾಜೀವ್ ಕುಮಾರ್, ಎಸ್.ಐ. ನಿಖಿಲ್ ಮೂರು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಮಚ್ಚಂಪಾಡಿ ಸಿ.ಎ. ನಗರದ ಇಬ್ರಾಹಿಂ ಖಲೀಲ್ ಹಾಗೂ ಕುಟುಂಬ ಗಲ್ಫ್ನಲ್ಲಿದ್ದಾಗ ಮೇ 19ರಂದು ಅವರ ಮನೆಗೆ ಕಳ್ಳರು ನುಗ್ಗಿದ್ದರು. ಮನೆಯ ಕಪಾಟು ತೆರೆದು ಅದರಲ್ಲಿದ್ದ 9 ಲಕ್ಷ ರೂಪಾಯಿ, 9 ಪವನ್ ಚಿನ್ನಾಭರಣ, ರ್ಯಾಡೋವಲ್ ಮೊದಲಾದವುಗಳನ್ನು ಕಳ್ಳರು ದೋಚಿದ್ದರು. ಈ ಪ್ರಕರಣದಲ್ಲಿ ಈ ಹಿಂದೆ ಓರ್ವ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದರು. ಆತನನ್ನು ವಿಚಾರಣೆಗೊಳಪಡಿಸಿದಾಗ ಮುಹಮ್ಮದ್ ಅರ್ಫಾಸ್ ಕೂಡಾ ಈ ಕಳವಿನಲ್ಲಿ ಭಾಗಿಯಾಗಿದ್ದಾನೆಂದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಈತನನ್ನು ಕಸ್ಟಡಿಗೆ ತೆಗೆದು ಕಳವು ನಡೆದ ಮನೆಗೆ ಕರೆದೊಯ್ದು ಮಾಹಿತಿ ಸಂಗ್ರಹಿಸಲಾಯಿತು. ಬಳಿಕ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಮುಹಮ್ಮದ್ ಅರ್ಫಾಸ್ ವಿರುದ್ಧ ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ.