ಯುವತಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ತಲೆಮರೆಸಿಕೊಂಡಿದ್ದ ಬಹುಪತ್ನಿವಲ್ಲಭ ೩೦ ವರ್ಷದ ಬಳಿಕ ಸೆರೆ
ಕಾಸರಗೋಡು: ೧೭ರ ಹರೆಯದ ಯುವತಿಯನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ೩೦ ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.
ಕಲ್ಲಿಕೋಟೆ ಪೇರಾಂಬ್ರ ಚಾಲಕ್ಕರದ ಕೋಮತ್ತ್ ರವೀಂದ್ರನ್ (೫೬) ಬಂಧಿತನಾದ ಆರೋಪಿ. ಹಲವೆಡೆಗಳಲ್ಲಿ ವಿಷ್ಣುದಾಸ್, ಅನ್ವರ್, ಅಬ್ದುಲ್ ರಹ್ಮಾನ್, ಕೃಷ್ಣದಾಸ್ ಸೇರಿದಂತೆ ಇತರ ಹಲವು ನಕಲಿ ಹೆಸರುಗಳಲ್ಲಿ ಕಳೆದ ೩೦ ವರ್ಷಗಳಿಂದ ಈತ ತಲೆಮರೆಸಿಕೊಂಡು ಜೀವಿಸುತ್ತಿದ್ದನು.
೧೯೯೮ ಫೆಬ್ರವರಿ ೧೫ರಂದು ಪಯ್ಯನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಪ್ರದೇಶದ ೧೭ರ ಹರೆಯದ ಯುವತಿಯೋರ್ವೆಯನ್ನು ಅಪಹರಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಆ ಪ್ರಕರಣದಲ್ಲಿ ಬಂಧಿತನಾದ ಆತ ೧೯೯೩ರಲ್ಲಿ ಜಾಮೀನಿನಲ್ಲಿ ಬಿಡುಗಡೆಗೊಂಡು, ಬಳಿಕ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಆ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನನ್ನು ತಲೆಮರೆಸಿಕೊಂಡಿರುವ ಆರೋಪಿಯಾಗಿ ಘೋಷಿಸಿ ಆತನ ಪತ್ತೆಗಾಗಿ ವಾರಂಟ್ ಜ್ಯಾರಿಗೊಳಿಸಿತ್ತು.
ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ಆರೋಪಿ ಕೇರಳದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಹೆಸರುಗಳಲ್ಲಿ ನಂತರ ಪ್ರತ್ಯಕ್ಷಗೊಂಡು ಎಂಟು ಯುವತಿಯರನ್ನು ಮದುವೆಯಾಗಿದ್ದಾನೆ. ಓರ್ವೆ ಯುವತಿಯನ್ನು ಮದುವೆಯಾಗಿ ಆಕೆಯೊಂದಿಗೆ ಕೆಲವು ದಿನ ಮಜಾ ಉಡಾಯಿಸಿದ ಬಳಿಕ, ಆಕೆಯ ನಗ-ನಗದನ್ನು ಎಗರಿಸಿ ಅಲ್ಲಿಂದ ದಿಢೀರ್ ಆಗಿ ಅಪ್ರತ್ಯಕ್ಷಗೊಂಡು ಬಳಿಕ ಅದೇ ರೀತಿ ಇತರ ಯುವತಿಯರನ್ನು ಮದುವೆಯಾಗಿ ಕೆಲವು ಕಾಲ ಅವರೊಂದಿಗೂ ಮಜಾ ಉಡಾಯಿಸಿ ಅವರ ನಗ-ನಗದಿನೊಂದಿಗೆ ಪರಾರಿಯಾಗುವುದು ಈತನ ರೀತಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೀಗೆ ೮ ಮಂದಿ ಯುವತಿಯರನ್ನು ಮದುವೆಯಾಗಿ ಬಳಿಕ ವಂಚಿಸಿರುವ ಈ ಬಹುಪತ್ನಿ ವಲ್ಲಭ ಕಳವು, ಖೋಟಾನೋಟು ಹಣ ಎಗರಿಸಿ ಪರಾರಿಯಾಗುವಿಕೆ, ವಂಚನೆ ಇತ್ಯಾದಿ ಹಲವು ಪ್ರಕರಣಗಳಲ್ಲೂ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಈತ ಕಲ್ಲಿಕೋಟೆ ಪೇಟೆಯಲ್ಲಿ ಜೀವಿಸುತ್ತಿರುವ ಮಾಹಿತಿ ಪಯ್ಯನ್ನೂರು ಎಸ್ಐ ಎಂ.ವಿ. ಶಿಜುರಿಗೆ ಲಭಿಸಿತ್ತು. ಅದರಂತೆ ಅವರ ನೇತೃತ್ವದಲ್ಲಿ ಪೊಲೀಸರು ಅಲ್ಲಿಗೆ ಸಾಗಿ ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಆತನನ್ನು ಬಂಧಿಸುವಲ್ಲಿ ಕೊನೆಗೂ ಸಫಲರಾಗಿದ್ದಾರೆ.