ರಾಜ್ಯದಲ್ಲಿ ಮುಂಗಾರು ಮಳೆಗೆ ಕ್ಷಣಗಣನೆ: ಜಡಿ ಮಳೆ ಸಾಧ್ಯತೆ ;ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ತಿರುವನಂತಪುರ: ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಇಂದು ಜಡಿ ಮಳೆಗೆ ಸಾಧ್ಯತೆ ಇದ್ದು, ಅದರಿಂದಾಗಿ ಈ ಎರಡು ಜಿಲ್ಲೆಗಳಲ್ಲಿ ಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಮಾತ್ರವಲ್ಲ ಈ ಎರಡು ಜಿಲ್ಲೆಗಳ ಪ್ರವಾಸಿ ಕೇಂದ್ರಗಳಲ್ಲಿ ಇಂದಿನಿಂದ ಬಿಗಿ ನಿಯಂತ್ರಣವನ್ನೂ ಏರ್ಪಡಿಸಲಾಗಿದೆ. ವಿಶೇಷವಾಗಿ ಮಲೆನಾಡು ಪ್ರದೇಶವಾದ ಕಾಸರಗೋಡು ಜಿಲ್ಲೆಯ ರಾಜಪುರಂ ಮತ್ತು ಜಿಲ್ಲೆಯ ಎಲ್ಲಾ ಬೀಚ್‌ಗಳಲ್ಲೂ ಇಂತಹ ಬಿಗಿ ನಿಯಂತ್ರಣ ಹೇರಲಾಗಿದೆ. ಮಲೆನಾಡ ಪ್ರದೇಶಗಳಲ್ಲಿ ಭೂಕುಸಿತ ಸಾಧ್ಯತೆಯ ಮುನ್ನೆಚ್ಚರಿಕೆಯನ್ನೂ ಇನ್ನೊಂದೆಡೆ ನೀಡಲಾಗಿದೆ. ಮಾತ್ರವಲ್ಲ ಅದನ್ನು ಮುಂಗಡವಾಗಿ ಮನಗಂಡು ಅಗತ್ಯದ ರಕ್ಷಣಾ ಕಾರ್ಯಾಚರಣೆಗಳಿಗಾಗಿ ವಿಪತ್ತು ನಿರ್ವಹಣಾ ದಳಗಳು ಹಾಗೂ ಅಗ್ನಿಶಾಮಕ ದಳವನ್ನು ಈಗಲೇ ಸಿದ್ಧಪಡಿಸಲಾಗಿದೆ.

ಆಯಾ ಗ್ರಾಮಗಳ ಗ್ರಾಮಧಿಕಾರಿಗಳು ಎಲ್ಲದರ ಬಗ್ಗೆ ತೀವ್ರ ನಿಗಾ ಇರಿಸಬೇಕೆಂಬ ನಿರ್ದೇಶವನ್ನೂ ನೀಡಲಾಗಿದೆ. ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಹೊರತಾಗಿ ಇತರ ೯ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನೊಂದೆಡೆ ಕೇರಳಕ್ಕೆ ಮುಂಗಾರು ಮಳೆ ಅದ್ಯಾವುದೇ ಸಮಯದಲ್ಲೂ ಪ್ರವೇಶಿಸ ಬಹುದೆಂದೂ, ಮಳೆಗಾಲ ಆರಂಭಗೊಂಡ ದಿನದಂದು ಬಿರುಸಿನ ಮಳೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಕಾಸರಗೋಡು, ಕಣ್ಣೂರು ವಯನಾಡು, ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ನಾಳೆಯೂ ರೆಡ್ ಅಲರ್ಟ್ ಘೋಷಿಸಲಾಗಿದೆ.

ಜಡಿ ಮಳೆಗೆ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕೋರೆಗಳ ಕಾರ್ಯಚಟುವಟಿಕೆಗಳಿಗೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ಭೂಕುಸಿತ ಸಾಧ್ಯತೆ ಇರುವ ಪ್ರದೇಶಗಳ ಪ್ರವಾಸಿಕೇಂದ್ರಗಳಲ್ಲಿ ಟ್ರಾಕಿಂಗ್‌ಗೂ ನಿಷೇಧ ಹೇರಲಾಗಿದೆ.

ನದಿಗಳ ದಡಗಳಲ್ಲಿ ಹಾಗೂ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ನೆರೆ ಉಂಟಾದರೆ ಸಂತ್ರಸ್ತರನ್ನು ಸುರಕ್ಷಿತ ತಾಣಗಳಿಗೆ ಸಾಗಿಸಿ ಅಲ್ಲಿ ಅವರ ವಾಸಕ್ಕೆ ಶಿಬಿರಗಳನ್ನು ಏರ್ಪಡಿಸುವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಧಾರಾಕಾರ ಮಳೆಯೊಂದಿಗೆ ಬಿರುಗಾಳಿಯೂ ಬೀಸುವ ಸಾಧ್ಯತೆ ಇದೆ. ಇದರಿಂದಾಗಿ ಮೀನುಗಾರಿಕೆ ಗೆಂದು ಸಮುದ್ರಕ್ಕಿಳಿಯುವ ಬೆಸ್ತರಿಗೂ ಜಾಗ್ರತಾ ನಿರ್ದೇಶ ನೀಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page