ಲೋಕಸಭಾ ಚುನಾವಣೆಗೆ ಸಜ್ಜಾದ ಬಿಜೆಪಿ: ರಾಜ್ಯದಲ್ಲಿ ಆರು ಕ್ಷೇತ್ರಗಳಲ್ಲಿ ಕಣ್ಣು
ತಿರುವನಂತಪುರ: ಲೋಕಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿರುವಂತೆಯೇ ಅದಕ್ಕೆ ಕೇರಳದಲ್ಲಿ ಬಿಜೆಪಿ ಈಗಲೇ ಸಜ್ಜಾಗಿ ನಿಂತಿದೆ. ರಾಜ್ಯದ ಆರು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಧಾನವಾಗಿ ಕಣ್ಣಿರಿಸಿದೆ. ಪ್ರತೀ ಲೋಕಸಭಾ ಕ್ಷೇತ್ರಗಳಲ್ಲಿ ತಲಾ ಮೂವರು ಎಂಬಂತೆ ಉಮೇದ್ವಾರ ಯಾದಿಯನ್ನು ಬಿಜೆಪಿ ತಯಾರಿಸುತ್ತಿದೆ. ಇದರಂತೆ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಪ್ರಕಾಶ್ ಬಾಬು, ಪಿ.ಕೆ. ಕೃಷ್ಣದಾಸ್ ಮತ್ತು ರವೀಶ ತಂತ್ರಿ ಕುಂಟಾರು ಅವರ ಹೆಸರು ಪಕ್ಷದ ಪರಿಗಣನೆಯಲ್ಲಿದೆ ಎಂದು ಹೇಳಲಾಗುತ್ತಿದೆ.
ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಎಸ್. ಜಯಶಂಕರ್‌ರ ಹೆಸರುಗಳನ್ನು ಪರಿಗಣಿಸಲಾಗಿದೆ. ಕಲ್ಲಿಕೋಟೆಯಲ್ಲಿ ಶೋಭಾ ಸುರೇಂದ್ರನ್ ಮತ್ತು ಎಂ.ಟಿ. ರಮೇಶ್, ಕಣ್ಣೂರಿನಲ್ಲಿ ಪ್ರಫುಲ್ ಕುಮಾರ್, ಕೆ. ರಂಜನ್, ಎರ್ನಾಕುಳಂ ನಲ್ಲಿ ಕಾಂಗ್ರೆಸ್‌ನ ಹಿರಿಯ ನೇತಾರ ಎ.ಕೆ. ಆಂಟನಿಯವರ ಪುತ್ರ ಅನಿಲ್ ಆಂಟನಿ, ಪತ್ತನಂತಿಟ್ಟದಲ್ಲಿ ಪಿ.ಸಿ. ಜೋರ್ಜ್‌ರ ಹೆಸರನ್ನೂ ಬಿಜೆಪಿ ಪರಿಶೀಲಿಸುತ್ತಿದೆ. ಇನ್ನು ಈಗ ರಾಹು ಗಾಂಧಿಯವರು ಸಂಸದರಾಗಿರುವ ವಯನಾಡು ಕ್ಷೇತ್ರದಲ್ಲಿ ಓರ್ವ ಬಲಿಷ್ಠ ಹಾಗೂ ಹಿರಿಯ ಪ್ರಭಾವಿ ನೇತಾರರನ್ನು ಕಣಕ್ಕಿಳಿಸಿ ಆ ಮೂಲಕ ಅಲ್ಲಿ ಪ್ರಬಲ ಪೈಪೋಟಿ ನೀಡಲು ಬಿಜೆಪಿ ಮುಂದಾಗಿದೆ. ಈ ಕ್ಷೇತ್ರದಲ್ಲಿ ಶೋಭಾ ಸುರೇಂದ್ರನ್ ಮತ್ತು ಪಿ.ಕೆ. ಕೃಷ್ಣದಾಸ್‌ರ ಹೆಸರನ್ನೂ ಬಿಜೆಪಿ ಪರಿಗಣಿಸುತ್ತಿದೆ.ಇಡುಕ್ಕಿ, ಮಾವೇಲಿಕ್ಕರ ಮತ್ತು ಆಲಪ್ಪುಳ ಕ್ಷೇತ್ರಗಳನ್ನು ಎನ್‌ಡಿಎ ಘಟಕ ಪಕ್ಷವಾದ ಬಿಡಿಜೆಎಸ್‌ಗೆ ನೀಡಲು ಬಿಜೆಪಿ ಚಿಂತನೆ ನಡೆಸಿದೆ. ಹಾಗೆ ನಡೆದಲ್ಲಿ, ಬಿಡಿಜೆಎಸ್ ನೇತಾರ ತುಷಾರ್ ವೆಳ್ಳಾಪಳ್ಳಿ ಅವರು ಆಲಪ್ಪುಳದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಇನ್ನು ಅಟ್ಟಿಂಙಲ್ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ವಿ. ಮುರಳೀಧರನ್ ಮತ್ತು ತೃಶೂರಿನಲ್ಲಿ ಸಿನೆಮಾ ನಟ ಸುರೇಶ್ ಗೋಪಿಯ ಹೆಸರನ್ನೂ ಈಗಾಗಲೇ ಪಕ್ಕಾಗೊಂಡಿದೆ.