ವರ್ಕಾಡಿಯಲ್ಲಿ ಕೆಂಪುಕಲ್ಲು ಗಣಿಗಾರಿಕೆ, ಮಣ್ಣು ಸಾಗಾಟ ವ್ಯಾಪಕ: ರಸ್ತೆಯಲ್ಲಿ ಬಿರುಕು
ವರ್ಕಾಡಿ: ವಯನಾಡ್‌ನಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ಇಡೀ ರಾಜ್ಯ ಶೋಕಸಾಗರದಲ್ಲಿ ಮುಳುಗಿರು ವಾಗಲೇ ಅದೇ ರೀತಿಯ ದುರಂತಗಳಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸಾಧ್ಯತೆ ಹೆಚ್ಚಿದೆ. ವಿವಿಧ ಮಾಫಿಯಾಗಳು ಹಾಗೂ ಅಧಿಕಾರಿಗಳು ಇದಕ್ಕೆ ಕಾರಣಕರ್ತ ರೆಂದೂ ಆರೋಪ ಕೇಳಿ ಬರುತ್ತಿದೆ.
ವರ್ಕಾಡಿ ಪಂಚಾಯತ್‌ನ ಸೊಡಂಕೂರು ಗುಡ್ಡೆಯ ಮೇಲೆ ಕೆಂಪುಕಲ್ಲು ಗಣಿಗಾರಿಕೆ ನಡೆದು ಅಲ್ಲಿಂದ ಕಲ್ಲು, ಮಣ್ಣು ವ್ಯಾಪಕ ಸಾಗಾಟವಾಗುತ್ತಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ.
ಈ ರೀತಿಯಲ್ಲಿ ಪ್ರಕೃತಿಗೆ ಧಕ್ಕೆ ಉಂಟುಮಾಡಿ ಕಾನೂನು ವಿರೋಧಿ ಚಟುವಟಿಕೆ ನಡೆಸುವವರನ್ನು ತಡೆಯಲು ನೇಮಿಸಿದ ಕಂದಾಯ, ಜಿಯೋಲಜಿ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಯಾರೂ ಅತ್ತ ಕಣ್ಣು ಹಾಯಿಸಿಲ್ಲವೆಂದೂ ನಾಗರಿಕರು ದೂರುತ್ತಿದ್ದಾರೆ. ಆದರೆ ಕಲ್ಲು ಗಣಿಗಾರಿಕೆ, ಮಣ್ಣು ಹಾಗೂ ಕಲ್ಲು ಸಾಗಾಟದಲ್ಲಿ ಸಕ್ರಿಯರಾದ ಮಾಫಿಯಾಗಳ ಭಯದಿಂದ ನಾಗರಿಕರು ಪ್ರತಿಭಟನೆಗೆ ಮುಂದಾಗುತ್ತಿಲ್ಲವೆನ್ನಲಾಗಿದೆ. ಗುಡ್ಡೆಯಲ್ಲಿ ಸೃಷ್ಟಿಯಾಗಿರುವ ಬೃಹತ್ ಆಳದ ಹೊಂಡಗಳಲ್ಲಿ ಮಳೆ ನೀರು ತುಂಬಿಕೊಂಡಿದೆ. ಈ ಗುಡ್ಡೆಯ ಬದಿಯಲ್ಲಿರುವ ರಸ್ತೆಯಲ್ಲಿ ಬಿರುಕು ಸೃಷ್ಟಿಯಾಗಿದೆ. ಮಳೆ ತೀವ್ರಗೊಂಡರೂ ಇಲ್ಲಿಯೂ ಭೂ ಕುಸಿತಕ್ಕೆ ಸಾಧ್ಯತೆ ಇದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಆದ್ದರಿಂದ ಇದಕ್ಕೆ ತಡೆಯೊಡ್ಡಬೆಕೆಂದೂ ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಮಹಾ ದುರಂತ ಸಂಭವಿಸಲಿದೆಯೆಂದೂ ನಾಗರಿಕರು ತಿಳಿಸುತ್ತಿದ್ದಾರೆ.