ಶಾಲೆಗಳಲ್ಲಿ ಮಧ್ಯಾಹ್ನದೂಟ: ಕೇಂದ್ರದಿಂದ ೧೦೮ ಕೋಟಿ ರೂ. ಮಂಜೂರು
ತಿರುವನಂತಪುರ: ರಾಜ್ಯದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ದೂಟ ವಿತರಣಾ ಯೋಜನೆಗಾಗಿ ಕೇಂದ್ರ ಸರಕಾರ ೧೦೮.೩೪ ಕೋಟಿ ರೂ. ಮಂಜೂರು ಮಾಡಿದೆ ಎಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ.
ಮಧ್ಯಾಹ್ನದೂಟ ಯೋಜನೆ ಬಗ್ಗೆ ಲೆಕ್ಕಪತ್ರ ನೀಡಿಲ್ಲವೆಂಬ ರೀತಿಯ ಪ್ರಚಾರ ಸರಿಯಲ್ಲ. ಈ ಯೋಜನೆ ಪ್ರಕಾರ ಕೇಂದ್ರ ಸರಕಾರದ ಪಾಲು ವತಿಯಿಂದ ಒಂದನೇ ಕಂತು ರೂಪದಲ್ಲಿ ಶೇ. ೬೦ ಮತ್ತು ದ್ವಿತೀಯ ಕಂತು ಆಗಿ ಶೇ. ೪೦ರಷ್ಟು ಹಣ ಲಭಿಸಬೇಕಾಗಿದೆ. ಆದರೆ ಈ ಬಾರಿ ಅದನ್ನು ತಲಾ ಶೇ. ೨೫ ಎಂಬಂತೆ ನಾಲ್ಕು ಕಂತುಗಳಂತೆ ನೀಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಇದರಂತೆ ಕೇಂದ್ರದಿಂದ ಕೇರಳಕ್ಕೆ ೨೮೪.೩೧ ಕೋಟಿ ರೂ. ಲಭಿಸಬೇಕಾಗಿದೆ. ಆದರೆ ಈ ಹಣ ಮಂಜೂರು ಮಾಡುವಿಕೆಯನ್ನು ವಿಳಂಬಗೊಳಿಸಲು ಅಥವಾ ನೀಡದೆ ಇರಲು ಕೇಂದ್ರ ಸರಕಾರ ಯತ್ನಿಸುತ್ತಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಟೀಕಿಸಿದ್ದಾರೆ.