ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್‌ಗೆ ಪಾಕಿಸ್ತಾನದಿಂದ ಬಾಂಬ್ ಬೆದರಿಕೆ
ಲಕ್ನೋ: ಉತ್ತರ ಪ್ರದೇಶದ ಫೆತೆಪುರದಲ್ಲಿರುವ ಶ್ರೀಕೃಷ್ಣ ಜನ್ಮಭೂಮಿ ಹಾಗೂ ಶಾಹಿ ಈದ್ಗ್ಗಾ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷರಿಗೆ ಪಾಕಿಸ್ತಾನ ಉಗ್ರರಿಂದ ಬೆದರಿಕೆ ಕರೆ ಬಂದಿದೆ. ವಾಟ್ಸಪ್ ಕರೆ ಮಾಡಿದ ವ್ಯಕ್ತಿ ತಾನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಸೇರಿದವನಾಗಿದ್ದಾನೆ ಎಂದು ಹೇಳಿಕೊಂಡಿದ್ದಾನೆ. ಮಥುರಾದ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್‌ನ ಅಧ್ಯಕ್ಷರಾಗಿರುವ ಶಕುಂಭರಿ ಪೀಠಾಧೀಶ್ವರ ಅಶುತೋಷ್‌ರಿಗೆ ಈ ಬೆದರಿಕೆ ಸಂದೇಶ ಬಂದಿದೆ.
ಇವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಉಳಿದುಕೊಂಡಿರುವ ಶ್ರೀ ಕೃಷ್ಣ ಜನ್ಮಭೂಮಿ ವರ್ಸಸ್ ಶಾಹಿ ಮಸೀದಿ ಈದ್ಗಾ ಮೊಕದ್ದಮೆಯ ಪ್ರಮುಖ ಕಕ್ಷಿದಾರರಾಗಿದ್ದಾರೆ.
ಈ ಪ್ರಕರಣದ ವಿಚಾರಣೆಗಾಗಿ ಅವರು ನಿನ್ನೆ ಹೈಕೋರ್ಟ್‌ಗೆ ತೆರಳಿದ್ದರು. ಅಲ್ಲಿಂದ ಸಂಜೆ ಮಥುರಾಕ್ಕೆ ಹಿಂತಿರುಗಿದ್ದರು. ಈ ಮಧ್ಯೆ ರಾತ್ರಿ ಅವರ ಮೊಬೈಲ್‌ಗೆ ಈ ಬಾಂಬ್ ಬೆದರಿಕೆ ಸಂದೇಶ ಬಂದಿದೆ.
ಅನಾಮಧೇಯ ನಂಬರಿನಿಂದ ಈ ಕರೆ ಬಂದಿದೆ. ಅದನ್ನು ಆಲಿಸಿದಾಗ ಪ್ರಕರಣ ಹಿಂಪಡೆಯದಿದ್ದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ. ಮಾತ್ರವಲ್ಲ ಆ ಉಗ್ರ ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾನೆ.
ಈ ಸಂಬಂಧ ಅಶುತೋಷ್ ಅವರು ಸದರ್ ಕೊತ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೊಬೈಲ್ ಫೋನ್ ಸಂಖ್ಯೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.