ಸಿಪಿಎಂ ಪಾರ್ಟಿ ಗ್ರಾಮಗಳಲ್ಲಿ ಮತೀಯ ಉಗ್ರಗಾಮಿಗಳಿಗೆ ಅಭಯ- ಕೆ. ಸುರೇಂದ್ರನ್
ತಿರುವನಂತಪುರ: ಸಿಪಿಎಂನ ಪಾರ್ಟಿ ಗ್ರಾಮಗಳಲ್ಲಿ ಮತೀಯ ಉಗ್ರಗಾಮಿಗಳು ಬೆಳೆಯುತ್ತಿದ್ದಾರೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಆರೋಪಿಸಿದ್ದಾರೆ. ತೊಡುಪುಳ ನ್ಯೂಮಾನ್ ಕಾಲೇಜಿನ ಪ್ರಾಧ್ಯಾಪಕ ಟಿ.ಜೆ. ಜೋಸೆಫ್‌ರ ಕೈ ಕತ್ತರಿಸಿದ ಪ್ರಕರಣದ ಒಂದನೇ ಆರೋಪಿ ಕಣ್ಣೂರಿನ ಮಟ್ಟನ್ನೂರಿನಲ್ಲಿ ೧೩ ವರ್ಷ ಕಾಲ ಸುಖವಾಗಿ ವಾಸಿಸುತ್ತಿದ್ದುದು ಇದಕ್ಕೆ ಸೂಕ್ತ ಉದಾಹರಣೆಯಾಗಿದೆ ಎಂದೂ ಅವರು ತಿಳಿಸಿದ್ದಾರೆ. ತಿರುವನಂತಪುರದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡುತ್ತಾ ಅವರು ಈ ಆರೋಪ ಹೊರಿಸಿದ್ದಾರೆ. ಮಟ್ಟನ್ನೂರು ರಾಜ್ಯದಲ್ಲಿ ಸಿಪಿಎಂನ ಅತೀ ದೊಡ್ಡ ಶಕ್ತಿ ಕೇಂದ್ರವಾಗಿದೆ. ಪ್ರಾಧ್ಯಾಪಕನ ಕೈ ಕತ್ತರಿಸಿದ ಆರೋಪಿ ಸವಾದ್ ಎಂಬತನನ್ನು ಮಟ್ಟನ್ನೂರಿನಿಂದ ಎನ್‌ಐಎ ಸೆರೆ ಹಿಡಿದಿದೆ. ಕೈ ಕಡಿದ ಆರೋಪಿ ೧೩ ವರ್ಷ ಕಾಲ ಮಟ್ಟ ನ್ನೂರಿನಲ್ಲಿದ್ದರೂ ಪೊಲೀಸರಿಗೆ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂಬು ವುದನ್ನು ನಂಬಲಾಗದು. ಕೇರಳ ಸರಕಾರಕ್ಕೆ ಇದು ನಾಚಿಕೆಗೇಡಿನ ವಿಷಯವಾಗಿದೆ. ಕಣ್ಣೂರಿನಲ್ಲಿ ಉಗ್ರಗಾಮಿಗಳಿಗೆ ಎಲ್ಲಾ ಸೌಕರ್ಯ ಲಭಿಸಲು ಕಾರಣವೇನೆಂದು ತನಿಖೆ ನಡೆಸಬೇಕೆಂದೂ ಸುರೇಂದ್ರನ್ ಒತ್ತಾಯಿಸಿದ್ದಾರೆ.
ಒಂದು ಕಾಲದಲ್ಲಿ ಉಗ್ರಗಾಮಿಗಳು ಹೆಚ್ಚಾಗಿ ಅವಿತುಕೊಂಡಿರುತ್ತಿದ್ದುದು ಕಾಶ್ಮೀರದಲ್ಲಾಗಿತ್ತು. ಆದರೆ ಕಾಶ್ಮೀರ ಈಗ ಸುರಕ್ಷಿತ ಸ್ಥಳವಲ್ಲವೆಂದು ತಿಳಿದು ಉಗ್ರಗಾಮಿಗಳು ಕೇರಳವನ್ನು ತಮ್ಮ ಕೇಂದ್ರವನ್ನಾಗಿಸಿ ಕೊಂಡಿದ್ದಾರೆ. ಉಗ್ರಗಾಮಿಗಳಿಗೆ ಸಹಾಯವೊದಗಿಸುವ ನಿಲುವನ್ನು ರಾಜ್ಯ ಸರಕಾರ ಕೈಗೊಳ್ಳುತ್ತಿದೆ. ಓಟಿಗಾಗಿ ಸಿಪಿಎಂ ಮತೀಯ ಉಗ್ರಗಾ ಮಿಗಳನ್ನು ಬೆಂಬಲಿಸುತ್ತಿದೆಯೆಂದೂ ಸುರೇಂದ್ರನ್ ಆರೋಪಿಸಿದ್ದಾರೆ.