ಸ್ವಂತ ಹಣದಿಂದ ರಸ್ತೆ ದುರಸ್ತಿಗೊಳಿಸಿದ ಲಾರಿ ಚಾಲಕನ ಸಮಾಜಸೇವೆಗೆ ಪ್ರಶಂಸೆ
ಮಂಜೇಶ್ವರ: ಕಾಂಕ್ರೀಟ್ ರಸ್ತೆಯ ಇಕ್ಕಡೆಗಳಲ್ಲಿ ತಗ್ಗಾಗಿರುವ ಕಾರಣ ದ್ವಿಚಕ್ರ ವಾಹನಗಳು ನಿತ್ಯವೂ ಅಪಘಾತಕ್ಕೀಡಾಗುತ್ತಿರುವುದನ್ನು ಮನಗಂಡ ಲಾರಿ ಚಾಲಕರೋರ್ವರು ಅಲ್ಲಗೆ ಮಣ್ಣು ಹಾಕಿ ಸಮತಟ್ಟುಗೊಳಿಸಿದ ಘಟನೆ ಪ್ರದೇಶದಲ್ಲಿ ಗಮನಸೆಳೆದಿದೆ. ತೂಮಿನಾಡು ನಿವಾಸಿ ಲಾರಿ ಚಾಲಕ ನಾರಾಯಣ ಈ ಸಮಾಜಸೇವೆ ಮಾಡಿ ಮಾದರಿಯಾದವರು. ತೂಮಿನಾಡುಪದವು ಕಾಂಕ್ರೀಟ್ ರಸ್ತೆಯ ಎರಡೂ ಕಡೆ ತಗ್ಗಾಗಿರುವ ಕಾರಣ ವಾಹನಗಳಿಗೆ ಸೈಡ್ ನೀಡುವ ವೇಳೆ ದ್ವಿಚಕ್ರ ಸವಾರರು ಅಪಘಾತಕ್ಕೀಡಾಗುತ್ತಿದ್ದರು. ಈ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಿದರೂ ಅವರು ಮೌನ ವಹಿಸಿದ ಹಿನ್ನೆಲೆಯಲ್ಲಿ ಸ್ವಂತಕ್ಕಾಗಿ ಬದುಕುವ ಜೊತೆಗೆ ಸಮಾಜಕ್ಕಾಗಿ ಬದುಕಬೇಕೆಂಬ ಸಂದೇಶದೊಂದಿಗೆ ಲಾರಿ ಚಾಲಕ ತನ್ನ ಸ್ವಂತ ಜೇಬಿನಿಂದ ಹಣ ವೆಚ್ಚಮಾಡಿ ಜೆಸಿಬಿ ಬಳಸಿ ಟಿಪ್ಪರ್ ಲಾರಿಯಲ್ಲಿ ಮಣ್ಣು ತಂದು ರಸ್ತೆಯ ಬದಿಗೆ ಹಾಕಿ ಸಮತಟ್ಟುಗೊಳಿಸಿದ್ದಾರೆ. ಇವರ ಸೇವಾ ಮನೋಭಾವ ಸ್ಥಳೀಯರಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.