ಹೆಚ್ಚುತ್ತಿರುವ ಜ್ವರ: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಜ್ವರ ಚಿಕಿತ್ಸೆಗಾಗಿ ಪ್ರತ್ಯೇಕ ಒ.ಪಿ
ಕಾಸರಗೋಡು: ಜಿಲ್ಲೆಯಲ್ಲಿ ಜ್ವರ ವ್ಯಾಪಕವಾಗಿ ಹರಡುತ್ತಿದೆ. ಜಿಲ್ಲಾ ಆಸ್ಪತ್ರೆ, ಜನರಲ್ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜ್ವರ ಹಿನ್ನೆಲೆಯಲ್ಲಿ ಚಿಕಿತ್ಸೆ ಗಾಗಿ ತಲುಪುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಲೆಕ್ಕಗಳಿಂದ ತಿಳಿದು ಬರುತ್ತಿದೆ. ಕಾಸರಗೋಡು ಜನರಲ್ ಆಸ್ಪತ್ರೆಗೆ ಹೆಚ್ಚಾಗಿ ಜನರು ಜ್ವರ ಚಿಕಿತ್ಸೆಗಾಗಿ ತಲುಪುತ್ತಿದ್ದಾರೆ. ದಿನಂಪ್ರತಿ 2000ಕ್ಕೂ ಅಧಿಕ ಮಂದಿ ಇಲ್ಲಿಗೆ ಚಿಕಿತ್ಸೆಗಾಗಿ ತಲುಪುತ್ತಿದ್ದಾರೆ ಎಂದು ಲೆಕ್ಕಗಳಿಂದ ತಿಳಿದು ಬರುತ್ತದೆ. ಟೋಕನ್ ತೆಗೆಯಲು, ವೈದ್ಯರನ್ನು ಕಾಣರು ಸರದಿ ಸಾಲು ದೊಡ್ಡದಾಗಿ ಕಂಡು ಬರುತ್ತದೆ. ಇದನ್ನು ಗಮನಕ್ಕೆ ತೆಗೆದು ಅಪರಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕಾರ್ಯಾಚರಿಸುವ ಪ್ರತ್ಯೇಕ ಜ್ವರ ಒ.ಪಿ ಆರಂಭಿಸಲಾಗಿದೆ. ಇದು ಚಿಕಿತ್ಸೆಗಾಗಿ ತಲುಪುವ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸಣ್ಣ ಮಕ್ಕಳ ಸಹಿತ ಜ್ವರ ಬಾಧೆ ವ್ಯಾಪಕವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಚಿಕಿತ್ಸೆಗೆ ತಲುಪುವ ಮಕ್ಕಳಲ್ಲಿ ಹೆಚ್ಚಿನವರಿಗೆ 100 ಡಿಗ್ರಿಗಿಂತಲು ಅಧಿಕ ಜ್ವರ ದಾಖಲಿಸಲಾಗುತ್ತಿದೆ. ಈ ರೀತಿ ಯಲ್ಲಿರುವ ಜ್ವರ ಕಡಿಮೆಯಾಗಲು ಹೆಚ್ಚು ಸಮಯ ಬೇಕಾಗಿ ಬರುತ್ತಿದೆ ಎಂದು ವೈದ್ಯರು ತಿಳಿಸುತ್ತಿದ್ದಾರೆ. ವಾಂತಿ, ಹೊಟ್ಟೆನೋವು, ತಲೆ ತಿರುಗುವುದು, ಹಳದಿ ಕಾಮಾಲೆ, ಡೆಂಗ್ಯು ಜ್ವರ ಎಂಬೀ ರೋಗಗಳು ತಗಲಿ ಚಿಕಿತ್ಸೆಗೆ ತಲುಪುವವರ ಸಂಖ್ಯೆಯಲ್ಲೂ ಹೆಚ್ಚಳ ಉಂಟಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.