ಹೊಸಂಗಡಿಯಲ್ಲಿ ಹೊಸ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಿದ್ಧತೆ: ಪೇಟೆಯ ದಟ್ಟಣೆಗೆ ನೆಮ್ಮದಿ ನಿರೀಕ್ಷೆ
ಹೊಸಂಗಡಿ: ಪೇಟೆಯಲ್ಲಿ ಕಂಡು ಬರುವ ವಾಹನ ದಟ್ಟಣೆಗೆ ಅಲ್ಪ ಶಮನವಾಗುವ ಸಾಧ್ಯತೆ ಕಂಡು ಬರುತ್ತಿದೆ. ಹೊಸಂಗಡಿಯಲ್ಲಿ ಕೆಳಸ್ತರದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಶೀಘ್ರ ತೆರೆದುಕೊಡಲಾಗುವುದೆಂದು ತಿಳಿದು ಬಂದಿದೆ. ಹೀಗಾದರೆ ಮಂಗಳೂರು ಭಾಗದಿಂದ ಕಾಸರಗೋಡು ಭಾಗದತ್ತ ತೆರಳುವ ವಾಹನಗಳು ಇನ್ನು ಕೆಳಗಿನ ರಸ್ತೆಯಲ್ಲಿ ಸಂಚರಿಸಲಿದೆ.
ಪ್ರಸ್ತುತ ಅಗಲ ಕಿರಿದಾದ ರಸ್ತೆಯಲ್ಲಿ ಎರಡೂ ಕಡೆಗಳಿಗೆ ವಾಹನ ಸಂಚರಿಸುತ್ತಿದ್ದು ಇದರಿಂದ ವಾಹನ ದಟ್ಟಣೆ ಉಂಟಾಗಿ ರಸ್ತೆ ತಡೆ ಸೃಷ್ಟಿಯಾಗುತ್ತಿತ್ತು. ಕಳೆದ ಹಲವಾರು ತಿಂಗಳಿಂದ ಇಲ್ಲಿ ಕಾಮಗಾರಿ ನಡೆದು ಬರುತ್ತಿದೆ. ಈ ಮಧ್ಯೆ ಮಳೆ ಸುರಿದು ರಸ್ತೆಯಲ್ಲಿ ನೀರು ನಿಂತು ಕಾಮಗಾರಿಗೆ ಅಡಚಣೆ ಉಂಟಾಗಿತ್ತು. ಕಾಮ ಗಾರಿ ಹಿನ್ನೆಲೆಯಲ್ಲಿ ರಸ್ತೆ ಅಗಲ ಕಿರಿದಾಗಿದ್ದು, ಇದರಲ್ಲೇ ಎರಡೂ ಕಡೆಯ ವಾಹನ ಸಂಚರಿಸುತ್ತಿತ್ತು. ಅಲ್ಲದೆ ಮಂಜೇಶ್ವರ ಒಳಪೇಟೆಗೆ ತೆರಳುವ ವಾಹನಗಳು ರೈಲುಗೇಟ್ ಹಾಕಿದಾಗ ಈ ರಸ್ತೆಯಲ್ಲೇ ನಿಲ್ಲಬೇಕಾಗುತ್ತಿದ್ದು, ಇದು ರಸ್ತೆ ತಡೆಗೆ ಕಾರಣ ವಾಗುತ್ತದೆ. ಇಲ್ಲಿ ಇಕ್ಕಡೆಗಳ ಸರ್ವೀಸ್ ರಸ್ತೆ ಕಾಮಗಾರಿ ಇನ್ನು ಬಾಕಿ ಉಳಿದಿದೆ.