೩೫೦೦ ರೂ. ಮೌಲ್ಯದ ಮೋಟಾರ್ ಪಂಪ್ ಪಂ.ಗೆ ತಿಳಿಯದೆ ಸದಸ್ಯನಿಂದ ದುರಸ್ತಿ: ೧೮೦೦೦ ರೂ. ಬಿಲ್; ಬದಿಯಡ್ಕದಲ್ಲಿ ಮತ್ತೆ ವಿವಾದ
ಬದಿಯಡ್ಕ: ಹಳೆಯ ಮೋಟಾರು ಪಂಪ್ ದುರಸ್ತಿಗೊಳಿಸಲು ಹೊಸ ಪಂಪ್‌ನ ಬೆಲೆಯ ಇಮ್ಮಡಿಗೂ ಅಧಿಕವಾಗಿರುವುದು ಬದಿಯಡ್ಕದಲ್ಲಿ ವಿವಾದಕ್ಕೆ ಹೇತುವಾಗಿದೆ.
ಪಂಚಾಯತ್‌ಗೆ ತಿಳಿಯದೆ ಅನುಮತಿ ರಹಿತವಾಗಿ ಪಂಪ್ ದುರಸ್ತಿ ನಡೆಸಿದ ಎಸ್ಟಿಮೇಟ್ ಬಿಲ್ ಸಹಿತ ಪಂಚಾಯತ್‌ಗೆ ಸಮೀಪಿಸಿದ ಸದಸ್ಯನಿಗೆ ಅಧಿಕಾರಿಗಳು ಮನವರಿಕೆ ಮಾಡಲು ಯತ್ನಿಸಿದರು. ಸರಕಾರದ ಹಣವನ್ನು ವೆಚ್ಚ ಮಾಡಲು ಕೆಲವು ವ್ಯವಸ್ಥೆ, ಕ್ರಮಗಳಿವೆ ಎಂದೂ ಹಲವು ಬಾರಿ ಪಂಚಾಯತ್ ಸದಸ್ಯನಾಗಿ ಆಯ್ಕೆಯಾಗಿರುವ ಓರ್ವ ವ್ಯಕ್ತಿ ಅದನ್ನೆಲ್ಲಾ ಅವಗಣಿಸುವುದು ಸರಿಯಲ್ಲವೆಂದೂ ಅಧಿಕೃತರು ಸದಸ್ಯನಿಗೆ ನೆನಪಿಸಿದರು. ಈ ವೇಳೆ ತನ್ನಲ್ಲಿ ಆಟ ಆಡಿದರೆ ನಾನು ಯಾರೆಂದು ತೋರಿಸಿಕೊಡುವೆನೆಂದು ತಾಕೀತು ನೀಡಿ ಸದಸ್ಯ ಪಂಚಾಯತ್ ಕಚೇರಿಯಿಂದ ತೆರಳಿರುವುದಾಗಿ ಹೇಳಲಾಗಿದೆ. ಬಳಿಕ ಕಾಲನಿಯಲ್ಲಿ ಕುಡಿಯುವ ನೀರಿಗಾಗಿ ಸ್ಥಾಪಿಸಿದ್ದ ಮೋಟಾರು ಪಂಪ್ ಕಾಣೆಯಾಗಿದೆ. ಮಾಹಿತಿ ತಿಳಿದ ಪಂಚಾಯತ್ ಅಧಿಕಾರಿಗಳು ಮೋಟಾರು ಪಂಪ್ ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಪಂಪ್ ದುರಸ್ತಿಗೊಳಿಸಿದ ವ್ಯಕ್ತಿಯನ್ನು ಪ್ರಶ್ನಿಸಿದಾಗ ಘಟನೆ ವಿಷಯ ತಿಳಿದು ಬಂದಿದೆ. ೩೫೦೦ ರೂಪಾಯಿಗೆ ಹೊಸ ಮೋಟಾರು ಪಂಪ್ ಇದೆ ಎಂದೂ, ಹಳೆಯದನ್ನು ದುರಸ್ತಿಪಡಿಸಲು ೧೮,೦೦೦ ರೂ.ವಿನ ಬಿಲ್ ಮಾಡಿದ್ದು ಹೇಗೆ ಎಂಬ ಬಗ್ಗೆ ಮೆಕ್ಯಾನಿಕ್ ಪೊಲೀಸರಲ್ಲಿ ಸೂಚಿಸಿರುವುದಾಗಿ ಹೇಳಲಾಗುತ್ತಿದೆ. ಪ್ರಶ್ನಿಸಿದ ಬಳಿಕ ಮೆಕ್ಯಾನಿಕ್‌ನನ್ನು ಪೊಲೀಸರು ಕಳುಹಿಸಿದ್ದು, ಹೆಚ್ಚು ವಿಳಂಬವಿಲ್ಲದೆ ಕಾಣೆಯಾಗಿದ್ದ ಮೋಟಾರು ಪಂಪ್ ಅದೇ ಸ್ಥಳದಲ್ಲಿ ಸ್ಥಾಪಿಸಿದ ರೀತಿಯಲ್ಲಿ ಕಂಡು ಬಂದಿದೆ.
ಮೋಟಾರು ಪಂಪ್ ಮತ್ತೆ ಲಭಿಸಿದ ಹಿನ್ನೆಲೆಯಲ್ಲಿ ಓರ್ವ ಪಂಚಾಯತ್ ಸದಸ್ಯ ಈ ವ್ಯವಹಾರದಲ್ಲಿ ಭಾಗಿಯಾಗಿರುವ ಕಾರಣ ಅಧಿಕಾರಿಗಳು ಇದರ ಮುಂದಿನ ಕ್ರಮಗಳಿಂದ ತಾತ್ಕಾಲಿಕವಾಗಿ ಹಿಂಜರಿದರು. ಈ ಘಟನೆಯಲ್ಲಿ ರಾಷ್ಟ್ರೀಯ ಪಕ್ಷವೊಂದರ ಹೆಸರೂ ಕೂಡಾ ಚರ್ಚಾ ವಿಷಯವಾಗಿದೆ. ವಾಟ್ಸಪ್‌ನಲ್ಲಿ ಈ ವಿಷಯ ಕನ್ನಡ, ಮಲಯಾಳದಲ್ಲಿ ಹರಿದಾಡುತ್ತಿದ್ದು ವೈರಲ್ ಆದ ಕಾರಣ ಕಾರ್ಯಕರ್ತರಲ್ಲೂ ಪ್ರತಿಭಟನೆ ಬಲಗೊಳ್ಳುತ್ತಿದೆ.
ಇದೇ ವೇಳೆ ಬದಿಯಡ್ಕ ಪಂಚಾಯತ್‌ನಲ್ಲಿ ಈ ಹಿಂದೆಯೂ ಇದೆಲ್ಲ ಉಂಟಾಗಿತ್ತೆಂದೂ, ಅದೇ ರೀತಿಯನ್ನು ಮುಖಂಡ ಅನುಸರಿಸಿರುವುದಾಗಿ ವಿವಿಧ ಪಕ್ಷಗಳ ನೇತೃತ್ವ ಮೂಲಗಳು ತಿಳಿಸುತ್ತಿರುವುದಾಗಿ ಕಾರ್ಯಕರ್ತರು ನುಡಿಯುತ್ತಾರೆ. ಆದರೆ ಯಾವುದೇ ಪಕ್ಷದ ನಾಯಕತ್ವ ಸಾರ್ವಜನಿಕ ಸೊತ್ತು ಕೊಳ್ಳೆ ಹೊಡೆಯಲಿರುವ ಯತ್ನದ ವಿರುದ್ಧ ಪ್ರತಿಕ್ರಿಯಿಸಲು ಸಿದ್ಧವಾಗಿಲ್ಲವೆಂಬುದು ಗಮನಾರ್ಹವಾಗಿದೆ.