ಅಭಿವೃದ್ಧಿಗೊಳ್ಳುತ್ತಿರುವ ಮಂಜೇಶ್ವರ ರೈಲು ನಿಲ್ದಾಣ: ಹೆಚ್ಚಿನ ರೈಲುಗಳ ನಿಲುಗಡೆಗೆ ಸ್ಥಳೀಯರ ಬೇಡಿಕೆ
ಮಂಜೇಶ್ವರ: ಕಳೆದ ಹಲವು ವರ್ಷಗಳಿಂದ ಅವ್ಯವಸ್ಥೆಯಲ್ಲಿ ಮುಂದುವರಿಯುತ್ತಿದ್ದ ಮಂಜೇಶ್ವರ ರೈಲು ನಿಲ್ದಾಣ ಈಗ ಅಭಿವೃದ್ಧಿಯತ್ತ ಮುಖ ಮಾಡಿದೆ. ಹೊಸತಾಗಿ ಟಿಕೆಟ್ ಕೌಂಟರ್ ಕಟ್ಟಡ, ಮೇಲ್ಸೇತುವೆ ನಿರ್ಮಾಣವಾಗಿದೆ. ಪ್ಲಾಟ್ ಫಾರ್ಮ್ನ ನೆಲಕ್ಕೆ ಕಾಂಕ್ರೀಟ್ ಹಾಗೂ ಕಲ್ಲು ಹಾಸುವ ಕೆಲಸ ಈಗ ನಡೆಯುತ್ತಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳ ಸಮತಟ್ಟುಗೊಳಿ ಸುವ ಕೆಲಸ ನಡೆಸಲಾಗುತ್ತಿದೆ. ಮಂಜೇಶ್ವರ ರೈಲು ನಿಲ್ದಾಣ ಅಭಿವೃದ್ಧಿಗೊಳ್ಳುತ್ತಿರುವುದು ಸ್ಥಳೀಯರಲ್ಲಿ ಸಂತಸ ಉಂಟು ಮಾಡಿದೆ. ಆದರೆ ಇದರ ಪ್ರಯೋಜನ ಸ್ಥಳೀಯರಿಗೆ ಲಭಿಸಬೇ ಕಿದ್ದರೆ ಈ ನಿಲ್ದಾಣದಲ್ಲಿ ಹೆಚ್ಚಿನ ರೈಲು ಗಾಡಿಗಳ ನಿಲುಗಡೆ ಅಗತ್ಯವಿದೆ ಎಂದು ಸ್ಥಳೀಯರು ತಿಳಿಸುತ್ತಾರೆ. ಈಗ ಕೆಲವೇ ರೈಲುಗಳಿಗೆ ಮಾತ್ರ ಇಲ್ಲಿ ನಿಲುಗಡೆ ಇದೆ. ಮಾವೇಲಿ, ಪರಶುರಾಮ ಎಕ್ಸ್ಪ್ರೆಸ್, ನೇತ್ರಾವತಿ, ಮಂಗಳ ಎಕ್ಸ್ಪ್ರೆಸ್ ಮೊದ ಲಾದ ದೀರ್ಘ ದೂರ ರೈಲುಗಳಿಗೆ ಇಲ್ಲಿ ನಿಲುಗಡೆ ನೀಡಬೇಕೆಂಬುದು ಇಲ್ಲಿನವರ ಪ್ರಧಾನ ಬೇಡಿಕೆಯಾಗಿದೆ. ಈಗ ಈ ಪ್ರದೇಶದ ಜನರು ದೂರ ಯಾತ್ರೆಗಾಗಿ ಕಾಸರಗೋಡು ಅಥವಾ ಕಂಕನಾಡಿ ರೈಲು ನಿಲ್ದಾಣಕ್ಕೆ ತೆರಳಬೇಕಾಗುತ್ತಿದೆ. ಮಂಜೇಶ್ವರದಲ್ಲಿ ಎಕ್ಸ್ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡಿದರೆ ಕುಂಬಳೆ, ಬಂದ್ಯೋಡು, ಉಪ್ಪಳ, ತಲಪಾಡಿ ಸಹಿತದ ಪರಿಸರದ ಪ್ರದೇಶಗಳ ಜನರಿಗೆ ಈ ನಿಲ್ದಾಣವನ್ನು ಆಶ್ರಯಿಸಬಹು ದಾಗಿದೆ. ಇದರಿಂದ ಈ ರೈಲು ನಿಲ್ದಾಣ ದಲ್ಲಿ ಆದಾಯವೂ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ರೈಲು ನಿಲ್ದಾಣ ಅಭಿ ವೃದ್ಧಿಯ ಜೊತೆ ರೈಲು ನಿಲುಗಡೆಗೂ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.