ಅರಣ್ಯಪಾಲಕರ ಮೇಲೆ ಗುಂಡು ಹಾರಾಟ : ಜಿಲ್ಲಾ ಗಡಿಪ್ರದೇಶದಲ್ಲಿ ಕಟ್ಟೆಚ್ಚರ
ಕಾಸರಗೋಡು: ಆರಳಂ ವನ್ಯಜೀವಿ ಕೇಂದ್ರದ ಚಾವಚ್ಚ ಎಂಬಲ್ಲಿ ಅರಣ್ಯ ಪಾಲಕರ ಮೇಲೆ ಗುಂಡು ಹಾರಾಟ ನಡೆಸಿದ ಮಾವೋವಾದಿ ತಂಡವನ್ನು ಪತ್ತೆಹಚ್ಚಲು ತೀವ್ರ ಶೋಧ ನಡೆಯುತ್ತಿದೆ. ಅರಣ್ಯ, ಪೊಲೀಸ್ ಅಧಿಕಾರಿ ಗಳು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಾವೋ ವಾದಿ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ತಂಡರ್ ಬೋಲ್ಟ್ ಕೂಡಾ ಶೋಧ ಕಾರ್ಯಕ್ಕಾಗಿ ಆರಳಂಗೆ ತಲುಪಿದೆ. ಗುಂಡು ಹಾರಾಟ ನಡೆದ ಪ್ರದೇಶಗಳ ಸಹಿತ ವಿವಿಧೆಡೆಗಳಲ್ಲಿ ತೀವ್ರ ನಿಗಾ ಇರಿಸಲಾಗಿದೆ. ಶೋಧ ಕಾರ್ಯ ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಮಾವೋವಾದಿ ಸಂಘ ಪುಳಿಂಙೋ ಚುಂಡಂ ಮೂಲಕ ಕಾಸರಗೋಡು ಜಿಲ್ಲೆಗೆ ತೆರಳಲು ಸಾಧ್ಯತೆಯಿದೆಯೆಂಬ ವದಂತಿ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಚಿಟ್ಟಾರಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಪೊಲೀಸರು ತೀವ್ರ ನಿಗಾ ಇರಿಸಿದ್ದು ಪರಿಶೀಲನೆ ನಡೆಯುತ್ತಿದೆ. ಕಣ್ಣೂ ರಿನ ಮಲೆನಾಡು ವಲಯದಲ್ಲಿ ಮಾವೋವಾದಿಗಳು ಬೀಡು ಬಿಟ್ಟಿದ್ದಾರೆಂದು ಈ ಹಿಂದೆಯೇ ವರದಿಯಾಗಿತ್ತು. ಆದರೆ ಇಲ್ಲಿ ಗುಂಡು ಹಾರಾಟ ನಡೆದಿರುವುದು ಇದೇ ಮೊದಲ ಬಾರಿಯಾಗಿದೆ. ನಿನ್ನೆ ಮಧ್ಯಾಹ್ನ ಅರಣ್ಯ ಇಲಾಖೆಯ ತಾತ್ಕಾಲಿಕ ವಾಚರ್‌ನ ಮೇಲೆ ಗುಂಡು ಹಾರಾಟ ನಡೆದಿದೆ. ಮಾವೋ ವಾದಿ ಪಶ್ಚಿಮ ಘಟ್ಟ ಸ್ಪೆಷಲ್ ಝೋನ್ ಸೆಕ್ರೆಟರಿ ಸಿ.ಪಿ. ಮೊಯ್ದೀನ್ ನೇತೃತ್ವದಲ್ಲಿ ಗುಂಡು ಹಾರಾಟ ನಡೆದಿರು ವುದಾಗಿ ಸೂಚನೆಯಿದೆ. ತಂಡ ದಲ್ಲಿ ಓರ್ವೆ ಯುವತಿಯೂ ಇರುವುದಾಗಿ ಹೇಳಲಾಗುತ್ತಿದೆ. ಏಳು ಸುತ್ತು ಗುಂಡುಹಾರಾಟ ನಡೆದಿರುವುದಾಗಿಯೂಆದರೆ ಯಾರೂ ಗಾಯಗೊಂಡಿಲ್ಲ ವೆಂದು ಅರಣ್ಯಪಾಲಕರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.