ಅಸೌಖ್ಯದಿಂದ ಬಳಲುತ್ತಿದ್ದ ಶ್ರೇಯಸ್ ನಿಧನ
ಮುಳ್ಳೇರಿಯ: ಕಿಡ್ನಿ ಸಂಬಂಧ ರೋಗದಿಂದ ಬಳಲುತ್ತಿದ್ದ ಪಾರ್ಥಕೊಚ್ಚಿಯ ಶ್ರೇಯಸ್ (11) ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದನು. ಈತನ ಚಿಕಿತ್ಸೆಗಾಗಿ ಊರವರು ಸಮಿತಿ ರೂಪೀಕರಿಸಿ ಚಿಕಿತ್ಸಾನಿಧಿ ಸಂಗ್ರಹ ನಡೆಸುತ್ತಿದ್ದಂತೆ ಶ್ರೇಯಸ್ ಇಹಲೋಕ ತ್ಯಜಿಸಿದ್ದಾನೆ. ಈತನ ನಿಧನ ಸ್ಥಳೀಯರಲ್ಲಿ ಶೋಕಸಾಗರ ಸೃಷ್ಟಿಸಿದೆ. ಪಾರ್ಥಕೊಚ್ಚಿ ನಿವಾಸಿ ಶರತ್- ಅನುಪಮಾ ದಂಪತಿ ಪುತ್ರನಾದ ಶ್ರೇಯಸ್ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದ 6ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಇತ್ತೀಚೆಗೆ ಈತನಿಗೆ ಅಸೌಖ್ಯ ಕಂಡು ಬಂದಿದ್ದು, ತಜ್ಞವೈದ್ಯರನ್ನು ಭೇಟಿಯಾದಾಗ ಕಿಡ್ನಿ ಸಂಬಂಧ ಖಾಯಿಲೆ ಬಗ್ಗೆ ತಿಳಿದು ಬಂದಿದೆ. ಬಡ ಕುಟುಂಬಕ್ಕೆ ಸಹಾಯ ಮಾಡಲು ಚಿಕಿತ್ಸಾ ಸಹಾಯ ನಿಧಿ ರೂಪೀಕರಿಸಿ ಈಗಾಗಲೇ ಮೊತ್ತ ಸಂಗ್ರಹಿಸಲು ಆರಂಭಿಸಲಾಗಿತ್ತು. ಈ ಮಧ್ಯೆ ಅಸೌಖ್ಯ ಉಲ್ಬಣಗೊಂಡು ನಿನ್ನೆ ಮಧ್ಯಾಹ್ನ ಈತ ಕೊನೆಯುಸಿರೆಳೆದಿದ್ದಾನೆ. ಮೃತನು ತಂದೆ, ತಾಯಿ, ಸಹೋದರಿ ಭುವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.