ಆನೆಗಳನ್ನು ಉತ್ಸವ ಮೆರವಣಿಗೆಯಲ್ಲಿ ಉಪಯೋಗಿಸುವುದರ ವಿರುದ್ಧ ಹೈಕೋರ್ಟ್ ತೀವ್ರ ಆಕ್ಷೇಪ
ಕೊಚ್ಚಿ: ಉತ್ಸವಗಳಿಗೆ ಆನೆಯ ಮೆರವಣಿಗೆ ನಡೆಸುವುದರ ವಿರುದ್ಧ ತೀವ್ರವಾದ ಟೀಕೆ ಹೈಕೋರ್ಟ್‌ನಿಂದ ವ್ಯಕ್ತವಾಗಿದೆ. ಭೂಮಿಯಲ್ಲಿರುವ ಅತ್ಯಂತ ದೊಡ್ಡ ಜೀವಿಯನ್ನು ಮೆರವಣಿಗೆಗೆ ಉಪಯೋಗಿಸುವುದು ಮನುಷ್ಯರ ಅಹಂಕಾರವಾಗಿದೆ. ತಿಮಿಂಗಿಲ ನೀರಿನಲ್ಲಿದ್ದ ಕಾರಣ ಅದನ್ನು ಉಪಯೋಗಿಸಲು ಅಸಾಧ್ಯವಾದುದಕ್ಕೆ ದೇವರಿಗೆ ಕೃತಜ್ಞತೆ ಹೇಳಬೇಕು. ಇಲ್ಲದಿದ್ದರೆ ಆ ಜೀವಿಯನ್ನು ಕೂಡಾ ಮೆರವಣಿಗೆಗೆ ಉಪಯೋಗಿಸ ಲಾಗುತ್ತಿತ್ತೆಂದು ನ್ಯಾಯಾಧೀಶರಾದ ಎ.ಕೆ. ಜಯಶಂಕರನ್ ನಂಬ್ಯಾರ್, ಪಿ. ಗೋಪಿನಾಥ್ ಎಂಬಿವರ ವಿಭಾಗೀಯ ಪೀಠ ಮಾತಿನಲ್ಲಿ ಅಭಿಪ್ರಾಯಪಟ್ಟಿದೆ. ಮೃಗಗಳ ವಿರುದ್ಧವಾದ ಆಕ್ರಮಣಗಳನ್ನು ತಡೆಯುವುದಕ್ಕೆ ಸಂಬಂಧಿಸಿ ಅರ್ಜಿಗಳನ್ನು ಪರಿಗಣಿಸುತ್ತಿದ್ದ ವೇಳೆ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದೆ. ಕೇಸನ್ನು ನವೆಂಬರ್ 4ರಂದು ಮತ್ತೆ ಪರಿಗಣಿಸಲಾಗುವುದೆಂದು ನ್ಯಾಯಾ ಲಯ ತಿಳಿಸಿದೆ.
ಕಾಲುಗಳನ್ನು ಬಂಧಿಸಿ ಗಂಟೆಗಳ ಕಾಲ ಆನೆಗಳು ನಿಲ್ಲುತ್ತಿರುವ ಬಗ್ಗೆ ನ್ಯಾಯಾಲಯ ಸೂಚಿಸಿದ್ದು, ತಿರುಗಲು ಕೂಡಾ ಸ್ಥಳವಿಲ್ಲದ ಜಾಗದಲ್ಲಿ ಮೂರು ಆನೆಗಳನ್ನು ಮೆರವಣಿಗೆ ನಡೆಸಲಾಗುತ್ತಿದೆ. ಇದು ಅತ್ಯಂತ ಸಂಕಷ್ಟಕರವಾದ ಕೆಲಸವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಉತ್ಸವಗಳಿಗೆ ಆನೆಗಳ ಮೆರವಣಿಗೆ ಆಚಾರವಲ್ಲವೆಂದು ಬದಲಾಗಿ ಮನುಷ್ಯರ ಹಠಮಾರಿತನವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ. ಈ ಬಗ್ಗೆ ಹೊಸ ಕಾಯ್ದೆಗಳನ್ನು ರೂಪಿಸುವುದಾಗಿಯೂ ನ್ಯಾಯಾಲಯ ಮುನ್ನೆಚ್ಚರಿಕೆ ನೀಡಿದೆ.