ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ ವೈದ್ಯರ 2.23 ಕೋಟಿ ರೂ. ಲಪಟಾಯಿಸಿದ ಪ್ರಕರಣ: ರಾಜಸ್ಥಾನ ನಿವಾಸಿ ಸೆರೆ
ಕಾಸರಗೋಡು: ವರ್ಕ್ ಫ್ರಂ ಹೋಮ್ ಉದ್ಯೋಗ ಭರವಸೆ ನೀಡಿ ಹಾಗೂ ಆನ್‌ಲೈನ್ ಟ್ರೇ ಡಿಂಗ್ ಮೂಲಕ ವೈದ್ಯರೋರ್ವರ 2.23 ಕೋಟಿ ರೂ. ಲಪಟಾಯಿಸಿದ ಪ್ರಕರಣದ ಆರೋಪಿಯಾಗಿರುವ ರಾಜಸ್ಥಾನ ನಿವಾಸಿಯನ್ನು ಕಾಸರಗೋಡು ಸೈಬರ್ ಸೆಲ್ ಪೊಲೀಸರ ತಂಡ ಬಂಧಿಸಿದೆ.
ರಾಜಸ್ಥಾನ ಜೋಧ್‌ಪುರ್ ಕುಡಿ ಭಗಸ್ತಾನಿ ಬಳಿಯ ಸುನಿಲ್ ಕುಮಾರ್ ಜಾನ್ವರ್ (24) ಬಂಧಿತನಾದ ಆರೋಪಿ. ಕಾಸರಗೋಡು ವರಿಷ್ಠ ಪೊಲೀಸ್ ಅಧಿಕಾರಿ ಡಿ. ಶಿಲ್ಪ ಅವರ ಮೇಲ್ನೋಟದಲ್ಲಿ ಜಿಲ್ಲಾ ಕ್ರೈಮ್ ಬ್ರಾಂಚ್ ಡಿವೈಎಸ್‌ಪಿಯ ಹೊಣೆಗಾರಿಕೆ ಹೊಂದಿರುವ ಎಂ. ಸುನಿಲ್ ಕುಮಾರ್‌ರ ನೇತೃತ್ವದಲ್ಲಿ ಸೈಬರ್ ಸೆಲ್ ಸ್ಟೇಷನ್‌ನ ಎಸ್‌ಐ ಎಂ.ವಿ. ಶ್ರೀದಾಸ್, ಎ.ಎಸ್.ಐ ಕೆ. ಪ್ರಶಾಂತ್, ಎಸ್.ಸಿ.ಪಿ.ಒ ಎಂ.ನಾರಾಯಣನ್ ಮತ್ತು ಎಂ. ದಿಲೀಶ್ ಎಂಬವರನ್ನೊಳಗೊಂಡ ತಂಡ ಆರೋಪಿಯನ್ನು ರಾಜಸ್ಥಾನದಿಂದ ಬಂಧಿಸಿ ಕಾಸರಗೋಡಿಗೆ ಕರೆತಂದಿದೆ.
ರಾಜಸ್ಥಾನ ಶಾಸ್ತ್ರಿ ನಗರ ಪೊಲೀಸ್ ಠಾಣೆಯ ಪೊಲೀಸರ ಸಹಾಯದಿಂದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಹುಡುಕಿಕೊಂಡು ಕಾಸರಗೋಡು ಸೈಬರ್ ಪೊಲೀಸರ ತಂಡ ಐದು ದಿನಗಳ ಹಿಂದೆ ರಾಜಸ್ಥಾನಕ್ಕೆ ತೆರಳಿತ್ತು. ವೈದ್ಯರಿಂದ ಲಪಟಾಯಿಸಿದ ಹಣದಲ್ಲಿ ೧೮ ಲಕ್ಷ ರೂ. ಆರೋಪಿಯ ಬ್ಯಾಂಕ್ ಖಾತೆಗೆ ಬಂದಿತ್ತು. ಅದನ್ನು ಬಳಿಕ ಆತ ಚೆಕ್ ಬಳಸಿ ಹಿಂಪಡೆದಿದ್ದನು. ಆತ ಬ್ಯಾಂಕ್‌ಗೆ ನೀಡಿದ ವಿಳಾಸವನ್ನು ಕೇಂದ್ರೀಕರಿಸಿ ಆತನ ಪತ್ತೆಗಾಗಿರುವ ಶೋಧ ಕಾರ್ಯಾಚರಣೆಯನ್ನು ಪೊಲೀಸರು ರಾಜಸ್ಥಾನಕ್ಕೆ ಸಾಗಿ ಆರಂಭಿಸಿದ್ದರು. ಆಗ ಆತನ ತಂದೆ ಅಸೌಖ್ಯದಿಂದ ಜೋಧ್‌ಪುರದ ಆಸ್ಪತ್ರೆಯೊಂದರಲ್ಲಿ ದಾಖಲುಗೊಂಡಿರುವ ಮಾಹಿತಿ ಪೊಲೀಸರಿಗೆ ಲಭಿಸಿದೆ. ಅದರಂತೆ ಪೊಲೀಸರು ಆ ಆಸ್ಪತ್ರೆಗೆ ಸಾಗಿದಾಗ ಆರೋಪಿ ಆಸ್ಪತ್ರೆಗೆ ಬಂದಿದ್ದನು. ತಕ್ಷಣ ಪೊಲೀಸರು ಆತನನ್ನು ಸೆರೆ ಹಿಡಿಯಲೆತ್ನಿಸಿದಾಗ ಆಗ ಆತನ ಜತೆಗಿದ್ದ ಆತನ ಸಂಬಂಧಿಕರು ಹಾಗೂ ಊರವರು ಸೇರಿ ಪೊಲೀಸರನ್ನು ತಡೆಯಲೆತ್ನಿಸಿದರು. ನಂತರ ಶಾಸ್ತ್ರಿ ನಗರ ಪೊಲೀಸರ ಸಹಾಯದಿಂದ ಆತನನ್ನು ಬಂಧಿಸಿ, ಕಾಸರಗೋಡಿಗೆ ಕರೆತರಲಾಯಿತೆಂದು ಸೈಬರ್ ಸೆಲ್ ಪೊಲೀಸರು ತಿಳಿಸಿದ್ದಾರೆ.
ಆನ್‌ಲೈನ್ ಮೂಲಕ ವೈದ್ಯರಿಂದ ಲಪಟಾಯಿಸಿದ ಹಣದಲ್ಲಿ 13 ಲಕ್ಷದಷ್ಟು ಹಣವನ್ನು ಈ ವಂಚನಾ ಜಾಲದ ಪ್ರಕರಣದ ಇತರ ಆರೋಪಿಗಳ ಬ್ಯಾಂಕ್ ಖಾತೆಯಿಂದ ಪೊಲೀಸರು ಹಿಂಪಡೆದು ಅದನ್ನು ನ್ಯಾಯಾಲಯದ ಮೂಲಕ ಹಿಂತಿರುಗಿದ್ದಾರೆ. ಬಂಧಿತ ಆರೋಪಿಯನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸುತ್ತಿದ್ದು, ಈ ವಂಚನಾ ಪ್ರಕರಣದಲ್ಲಿ ಶಾಮೀಲಾಗಿರುವ ಇತರ ಆರೋಪಿಗಳ ಪತ್ತೆಗಾಗಿ ತೀವ್ರ ಯತ್ನದಲ್ಲಿ ತೊಡಗಿದ್ದಾರೆ.