ಆನ್ಲೈನ್ ವಂಚನೆ ವ್ಯಾಪಕ: ಹೊದಿಕೆ ಖರೀದಿಸಿದ ಶಾಸಕ ಎನ್.ಎ. ನೆಲ್ಲಿಕುನ್ನುರಿಗೆ ಮೋಸ; ಕೇಸು ದಾಖಲಿಸಿಕೊಂಡ ಸೈಬರ್ ಪೊಲೀಸ್
ಕಾಸರಗೋಡು: ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಅವರು ಆನ್ಲೈನ್ನ ವಂಚನೆಗೀಡಾಗಿದ್ದಾರೆ. ಈಬಗ್ಗೆ ಶಾಸಕ ನೀಡಿದ ದೂರಿನಂತೆ ಸೈಬರ್ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ೧೨೦೦ ರೂಪಾಯಿಯ ಹೊದಿಕೆ ಖರೀದಿಸಲು ಶಾಸಕ ಆನ್ಲೈನ್ನಲ್ಲಿ ಬುಕ್ ಮಾಡಿದ್ದರು. ಅದರಂತೆ ಹೊದಿಕೆ ತಲುಪಿದೆ, ಪಾರ್ಸೆಲ್ ತೆರೆದು ಪರಿಶೀಲಿಸಿದಾಗ ಅದು ತೀರಾ ಗುಣಮಟ್ಟವಿಲ್ಲದ ಹೊದಿಕೆಯಾಗಿದೆಯೆಂದು ಶಾಸಕರಿಗೆ ತಿಳಿಯಿತು. ಅನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಆನ್ಲೈನ್ ಮೂಲಕ ಖರೀದಿ ಸುವ ಹಲವರು ಸಾಮಗ್ರಿಗಳಿಗೆ ಗುಣಮಟ್ಟ ಇಲ್ಲವೆಂಬ ದೂರು ಈ ಹಿಂದೆಯೇ ಕೇಳಿಬಂದಿತ್ತು. ಹಲವರು ಈ ರೀತಿಯಲ್ಲಿ ವಂಚನೆಗೀಡಾಗಿದ್ದರೂ ದೂರು ನೀಡಲು ಯಾರೂ ಮುಂದಾಗುತ್ತಿಲ್ಲ. ಇದರಿಂದಲೇ ಇಂತಹ ವಂಚನೆಗಳು ವ್ಯಾಪಕಗೊಳ್ಳುತ್ತಿದೆ. ಶಾಸಕರೇ ಇದೀಗ ಈ ವಂಚನೆಗೀಡಾಗಿರುವುದು ಚರ್ಚೆಗೆ ಗ್ರಾಸವಾಗಿದೆ.