ಆರಿಕ್ಕಾಡಿ ನಿಧಿ ಶೋಧ ಪ್ರಕರಣ: ಲೀಗ್ ಮುಖಂಡನ ವಿರುದ್ಧ ತನಿಖೆಗೆ ಸಿಪಿಎಂ ಆಗ್ರಹ
ಕುಂಬಳೆ: ಆರಿಕ್ಕಾಡಿ ಕೋಟೆಯಿಂದ ನಿಧಿ ಸಂಗ್ರಹ ಯತ್ನ, ಬಳಿಕ ಅಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದ ನಿಗೂಢತೆಯನ್ನು ಬಯಲಿಗೆಳೆಯಬೇಕೆಂದು ಸಿಪಿಎಂ ಕುಂಬಳೆ ಲೋಕಲ್ ಸಮಿತಿ ಹೇಳಿಕೆಯಲ್ಲಿ ಆಗ್ರಹಿಸಿದೆ. ಮುಸ್ಲಿಂ ಲೀಗ್ ಮುಖಂಡ ಹಾಗೂ ಮೊಗ್ರಾಲ್ ಪುತ್ತೂರು ಪಂಚಾಯತ್ ಉಪಾಧ್ಯಕ್ಷ ಮುಜೀಬ್ ಕಂಬಾರ್ ಹಾಗೂ ತಂಡ ಕೋಟೆಯಿಂದ ನಿಧಿ ಹುಡುಕಾಟ ಮಧ್ಯೆ ಸ್ಥಳೀಯರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದರು. ಕಳೆದ ಕೆಲವು ದಿನಗಳ ಹಿಂದೆ ಕುಂಬಳೆಯ ಮುಸ್ಲಿಂಲೀಗ್‌ನಲ್ಲಿ ಕೆಲವು ಭ್ರಷ್ಟಾಚಾರ ಕಥೆಗಳು ಬಹಿರಂಗಗೊಂಡಿತ್ತು. ಇದರಲ್ಲಿ ಕುಂಬಳೆಯ ಯೂತ್ ಲೀಗ್ ನೇತಾರನ ಶಬ್ದಸಂದೇಶದಲ್ಲಿ ಹೊಯ್ಗೆ ಮಾಫಿಯಾಗಳಿಂದ ಪಾಲು ಪಡೆದ ಬಗ್ಗೆ ಕೆಲವು ಮುಖಂಡರ ಹೆಸರು ಬಹಿರಂಗಗೊಂಡಿತ್ತು. ಮೊಗ್ರಾಲ್ ಪುತ್ತೂರು, ಕುಂಬಳೆ ಆರಿಕ್ಕಾಡಿ ಕೋಟೆಯಿಂದ ನಿಧಿ ಸಂಗ್ರಹಿಸಲು ತಲುಪಿದ ಮುಜೀಬ್ ಕಂಬಾರ್‌ಗೆ ಈ ರೀತಿಯ ಮುಖಂಡರ ಬೆಂಬಲ ಲಭಿಸಿದೆಯೋ ಎಂಬ ಬಗ್ಗೆಯೂ ತನಿಖೆ ನಡೆಸಬೇಕೆಂದು ಇದರ ಹಿಂದೆ ಇತರ ಯಾರದಾದರೂ ಕೈವಾಡವಿದೆಯೋ ಎಂಬ ಬಗ್ಗೆಯೂ ತನಿಖೆ ನಡೆಸಬೇಕೆಂದು ಲೋಕಲ್ ಸಮಿತಿ ಕಾರ್ಯದರ್ಶಿ ಯೂಸಫ್ ಕೆ.ಬಿ ಆಗ್ರಹಿಸಿದ್ದಾರೆ.