ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿಗೆ 133 ವರ್ಷ ಕಠಿಣ ಸಜೆ, 4.5 ಲಕ್ಷ ರೂ. ಜುಲ್ಮಾನೆ
ಕಾಸರಗೋಡು: ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರ ಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶ ರಾಮುರಮೇಶ್‌ಚಂದ್ರಭಾನು ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು 133 ವರ್ಷ ಕಠಿಣ ಸಜೆ ಹಾಗೂ 4.5 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ವರ್ಕಾಡಿ ಉದ್ದಂಬೆಟ್ಟು ನಿವಾಸಿ ವಿಕ್ಟರ್ ಮೊಂತೇರೋ (43) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 18 ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
2021 ಸೆಪ್ಟಂಬರ್ 10ರ ಮೊದಲ ಯಾವುದೋ ದಿನದಂದು ಉದ್ದಂಬೆಟ್ಟುನಲ್ಲಿರುವ ಆರೋಪಿ ಆತನ ಮನೆಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಂತೆ ಆತನ ವಿರುದ್ಧ ಮಂಜೇಶ್ವರ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಕೇಸು ದಾಖಲಿಸಿಕೊಂ ಡಿದ್ದರು. ಅಂದು ಮಂಜೇಶ್ವರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಎ. ಸಂತೋಷ್ ಕುಮಾರ್ ಈ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಪ್ರಿಯಾ ಎ.ಕೆ. ನ್ಯಾಯಾಲಯದಲ್ಲಿ ವಾದಿಸಿದ್ದರು.