ಇಂದು ಅತ್ತಂ: ಓಣಂ ಸ್ವಾಗತಕ್ಕೆಕೇರಳೀಯರ ಸಿದ್ಧತೆ
ಕೊಚ್ಚಿ: ತಿರುವೋಣಂನ್ನು ಸ್ವಾಗತಿಸಲು ಇನ್ನು ಕೇರಳೀಯರು ಹತ್ತು ದಿನ ಕಾಯಬೇಕಾಗಿದೆ. ಹೂ ರಂಗೋಲಿ ರಚಿಸಿ ಮಹಾಬಲಿಯನ್ನು ಸ್ವಾಗತಿಸಲು ಕೇರಳ ಸಿದ್ಧವಾಗಿದೆ. ಇಂದು ಅತ್ತಂ ನಕ್ಷತ್ರ. ಮುಂದಿನ ಪ್ರತೀ ದಿನವೂ ಹಬ್ಬದ ವಾತಾವರಣದಲ್ಲಿ ಸಾಗಲಿದೆ. ಜಾತಿ, ಮತ ರಹಿತವಾಗಿ ವಿಶ್ವದೆಲ್ಲೆಡೆ ಇರುವ ಕೇರಳೀಯರು ಓಣಂ ಹಬ್ಬವನ್ನು ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಕೇರಳದಲ್ಲಿ ಇನ್ನು ಪ್ರತಿಯೋರ್ವರ ಮನೆಯಂಗಳದಲ್ಲಿ ಹೂರಂಗೋಲಿ ಕಂಡು ಬರಲಿದೆ. ಇಂದಿನಿಂದ ಓಣಂ ವರೆಗೆ ಹಾಕುವ ಹೂರಂಗೋಲಿಗೆ ಪ್ರತ್ಯೇಕತೆ ಇದೆ. ಸೆ. ೧೫ರಂದು ತಿರುವೋಣಂ ಆಚರಣೆ ನಡೆಯಲಿದೆ. ಓಣಂ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯ ಗುರಿಯಿರಿಸಿ ಹೂಗಳು ತಲುಪಿವೆ. ಇಂದಿನಿಂದ ಹೂ ಮಾರಾಟವೂ ಭರ್ಜರಿಯಾಗಿ ನಡೆಯಲಿದೆ. ಸರಕಾರಿ ಸಹಿತ ವಿವಿಧ ಓಣಂ ಸಂತೆಗಳಿಗೂ ಇಂದು ಚಾಲನೆ ನೀಡಲಾಗುವುದು. ಈ ವರ್ಷದ ಓಣಂ ಹಬ್ಬಾಚರಣೆಗೆ ಚಾಲನೆ ನೀಡಿ ತೃಪುಣಿತ್ತರದಲ್ಲಿ ಅತ್ತಚ್ಚಮಯಂ ಎಂಬ ಹೆಸರಲ್ಲಿ ಕಾರ್ಯಕ್ರಮ ನಡೆಯಿತು.