ಇಚ್ಲಂಗೋಡು ತೋಡಿನಲ್ಲಿ ಕಸಕಡ್ಡಿ ಸಂಗ್ರಹ: ತೆರವುಗೊಳಿಸಲು ಆಗ್ರಹ

ಮಂಜೇಶ್ವರ: ಮಂಗಲ್ಪಾಡಿ ಪಂಚಾಯತ್ ಇಚ್ಲಂಗೋಡು  ತಲೆಕಾನಕಟ್ಟದಿಂದ ಕಡೆಗದ್ದೆವರೆಗಿನ ತೋಡಿನಲ್ಲಿ ಕಸಕಡ್ಡಿ, ಮಣ್ಣು ತುಂಬಿಕೊಂಡಿರುವುದು ಕೃಷಿಗೆ ಪ್ರತಿಕೂಲವಾಗಿ ಬಾಧಿಸಿರುವುದಾಗಿ ದೂರಲಾಗಿದೆ. ಆರು ಮೀಟರ್ ಅಗಲ, ಐದು ಮೀಟರ್ ಆಳ ಹಾಗೂ ಎರಡವರೆ ಕಿಲೋ ಮೀಟರ್ ಉದ್ದವಿರುವ ತೋಡಿನಲ್ಲಿ ಮಳೆಗಾಲದಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಈ ನೀರನ್ನು ಬಳಸಿ ಸಮೀಪದ ಸುಮಾರು ೩೫೦ ಎಕ್ರೆ ಬಯಲು ಪ್ರದೇಶಗಳಲ್ಲಿ ಕೃಷಿ ನಡೆಸಲಾಗುತ್ತಿದೆ. ಆದರೆ ಕೆಲವು ವರ್ಷಗಳಿಂದ ಈ ತೋಡಿನಲ್ಲಿರುವ ಕೆಸರು, ಕಸಕಡ್ಡಿಗಳನ್ನು ತೆರವುಗೊಳಿಸ ದಿರುವುದರಿಂದ ಮಳೆಗಾಲದಲ್ಲಿ ಅದು ಬಯಲು ಪ್ರದೇಶಕ್ಕೆ ನುಗ್ಗಿ ಕೃಷಿ ನಾಶಗೊಳ್ಳುವ ಸ್ಥಿತಿ ಉಂಟಾಗುತ್ತಿದೆ. ತೋಡಿನ ಕಸಕಡ್ಡಿ ಮೊದಲಾದವುಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಹಲವು ಬಾರಿ ಪಂಚಾಯತ್, ಮಂಗಲ್ಪಾಡಿ ಕೃಷಿ ಭವನ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪರಿಹಾರವುಂಟಾಗಿಲ್ಲ ಎಂದು ದೂರಲಾಗಿದೆ. ಇದರಿಂದ ಇದೀಗ ಇದೇ ಬೇಡಿಕೆ ಮುಂದಿರಿಸಿ ಎನ್‌ಸಿಪಿ ಮಂಜೇಶ್ವರ ವಿಧಾನಸಭಾ ಸಮಿತಿ ಕೃಷಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದೆ. ಈ ಬಗ್ಗೆ ನಡೆದ ಸಭೆಯಲ್ಲಿ ಅಧ್ಯಕ್ಷ ಮೆಹಮೂದ್ ಕೈಕಂಬ, ಕೋಶಾಧಿಕಾರಿ ಆಲ್ವಾಯ್ ಶೆಟ್ಟಿ, ಅಬ್ದುಲ್ ರಹಮಾನ್ ಹಾಜಿ, ಸಿದ್ದಿಕ್ ಕೈಕಂಬ, ಬದರುದ್ದೀನ್, ಇಬ್ರಾಹಿಂ ಹಾಜಿ, ಮುಹಮ್ಮದ್ ಆನೆಬಾಗಿಲು, ಸುರೇಂದ್ರನ್ ಮೊದಲಾದವರು ಮಾತನಾಡಿದರು.

Leave a Reply

Your email address will not be published. Required fields are marked *

You cannot copy content of this page