ಇರಿಯಣ್ಣಿ: ಕ್ಯಾಮರಾದಲ್ಲಿ ಚಿರತೆ ದೃಶ್ಯ ಪತ್ತೆ
ಬೋವಿಕ್ಕಾನ: ಇರಿಯಣ್ಣಿ ಮತ್ತು ಪರಿಸರ ಪ್ರದೇಶಗಳಲ್ಲಿ ಕೆಲವು ದಿನಗಳ ಹಿಂದೆ ಚಿರತೆಯ ಕಾಲ್ಗುರುತುಗಳು ಪತ್ತೆಯಾದ ಬೆನ್ನಲ್ಲೇ ಆ ಪರಿಸರದಲ್ಲಿ ಅರಣ್ಯ ಇಲಾಖೆ ಅಳವಡಿಸಿದ ಕ್ಯಾಮರಾದಲ್ಲಿ ಚಿರತೆ ದೃಶ್ಯ ಪತ್ತೆಯಾಗಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಚಿರತೆ ಇರುವುದಂತೂ ಪಕ್ಕಾಗೊಂಡಂತಾಗಿದೆ.
ಇರಿಯಣ್ಣಿಗೆ ಸಮೀಪದ ಕುಣಿಯೇರಿಯಲ್ಲಿ ಕೆಲವು ದಿನಗಳ ಹಿಂದೆ ಊರವರು ಚಿರತೆಯನ್ನು ಕಂಡಿದ್ದರು. ಅದಾದ ಬಳಿಕ ಅಲ್ಲೇ ಒಂದು ಕಿಲೋ ಮೀಟರ್ ದೂರದ ಚೆಟ್ಟುತ್ತೋಡಿನ ಅನಿಲ್ ಕುಮಾರ್ ಎಂಬವರ ತೋಟದಲ್ಲಿ ಚಿರತೆಯ ಕಾಲ್ಗುರುತುಗಳು ಪತ್ತೆಯಾಗಿತ್ತು. ಅಲ್ಲೇ ಪಕ್ಕದ ಇತರ ಹಲವು ತೋಟಗಳಲ್ಲೂ ಈ ಗುರುತು ಪತ್ತೆಯಾಗಿತ್ತು. ಇದರಂತೆ ಚಿರತೆಯ ಪತ್ತೆಗಾಗಿರುವ ವ್ಯಾಪಕ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ತೊಡಗಿರುವಂತೆಯೇ ನಿನ್ನೆ ಅಲ್ಲಿನ ಕ್ಯಾಮರಾದಲ್ಲಿ ಚಿರತೆಯ ದೃಶ್ಯ ಗೋಚರಿಸಿತ್ತು. ಅದನ್ನು ಸೆರೆಹಿಡಿಯುವ ಯತ್ನದಲ್ಲಿ ಅರಣ್ಯ ಇಲಾಖೆಯವರು ತೊಡಗಿದ್ದಾರೆ.