ಉಕ್ಕಿನಡ್ಕದಲ್ಲಿ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸ ನಡೆದು ಇಂದಿಗೆ ೧೦ ವರ್ಷ: ಪೂರ್ಣಗೊಳ್ಳದ ಕಟ್ಟಡ ನಿರ್ಮಾಣ

ಬದಿಯಡ್ಕ: ಕಾಸರಗೋಡಿನ ಜನತೆಯ ಕನಸಾದ ಉಕ್ಕಿನಡ್ಕ ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ ನಡೆದು ಇಂದಿಗೆ ಭರ್ತಿ ಹತ್ತು ವರ್ಷ ಪೂರ್ತಿಗೊಂಡಿತು. ಆದರೆ ಇದುವರೆಗೆ ಆಸ್ಪತ್ರೆ ನಿರ್ಮಾಣ ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ. ಉತ್ತಮ  ಸೌಕರ್ಯಗಳೊಂದಿಗೆ ಆಸ್ಪತ್ರೆ ನಿರ್ಮಾಣ ಮಾಡುವ ಗುರಿಯೊಂದಿಗೆ ಜ್ಯಾರಿಗೊಳಿಸಿದ ಯೋಜನೆ ಮೂಲೆಗುಂಪಾಗುತ್ತಿದೆ. ಮೆಡಿಕಲ್  ಕಾಲೇಜಿಗೆ ಶಿಲಾನ್ಯಾಸ ನಡೆಸಿದ ಬಳಿಕ ಇದುವರೆಗೆ ಅಕಾಡೆಮಿಕ್ ಬ್ಲೋಕ್ ಹಾಗೂ ಆಡಿಟೋರಿಯಂನ ನಿರ್ಮಾಣ ಮಾತ್ರ ಪೂರ್ಣಗೊಂಡಿದೆ. ಕೋವಿಡ್ ಕಾಲದಲ್ಲಿ ಇದರಲ್ಲಿ  ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಿರುವುದು ಮಾತ್ರವೇ ಇದುವರೆಗಿನ ಏಕೈಕ ಸಾಧನೆಯಾಗಿದೆ.  ಅನಂತರ ನ್ಯೂರೋಲಜಿ ವಿಭಾಗ ಒಪಿ ಚಟುವಟಿಕೆ ಆರಂಭಿಸಿದೆಯಾದರೂ ರೋಗಿಗಳನ್ನು  ದಾಖಲಿಸಿ ಚಿಕಿತ್ಸೆ ನೀಡುವ ಸೌಕರ್ಯ ಇನ್ನಷ್ಟೇ ನಡೆಸಬೇಕಾಗಿದೆ.

೨೦೧೨ ಮಾರ್ಚ್ ೨೪ರಂದು ಅಂದಿನ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ನೇತೃತ್ವದ ಸರಕಾರ ಉಕ್ಕಿನಡ್ಕದಲ್ಲಿ ಕಾಸರಗೋಡು ಮೆಡಿಕಲ್ ಕಾಲೇಜು ನಿರ್ಮಿಸುವ ಬಗ್ಗೆ ಘೋಷಿಸಿದೆ. ಇದರಂತೆ ೨೦೧೩ ನವಂಬರ್ ೩೦ರಂದು ಶಿಲಾನ್ಯಾಸ ನಡೆಸಲಾಯಿತು. ಆಸ್ಪತ್ರೆ ಬ್ಲೋಕ್‌ಗೆ ೨೦೧೮ ನವಂಬರ್ ೨೫ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶಿಲಾನ್ಯಾಸ ನಡೆಸಿದರು.

೬೩ ಎಕ್ರೆ ಸ್ಥಳದಲ್ಲಿ ೫೦೦ ಹಾಸಿಗೆಗಳುಳ್ಳ  ಆಸ್ಪತ್ರೆ ನಿರ್ಮಾಣ ಗುರಿಯಿರಿಸಲಾಗಿದೆ. ಇಲ್ಲಿ ೨೭೦ ಹುದ್ದೆ ಮಂಜೂರು ಮಾಡಿರುವುದಾಗಿ ಇತ್ತೀಚೆಗೆ ಘೋಷಿಸಲಾಗಿತ್ತು. ಆಸ್ಪತ್ರೆ ಕಟ್ಟಡ ನಿರ್ಮಾಣ ಪೂರ್ತಿಗೊಳ್ಳದೆ ನೌಕರರ ನೇಮಕಾತಿ ನಡೆಸಿದರೇನು ಪ್ರಯೋಜನವಿದೆ. ಇದರಿಂದ ಒ.ಪಿ ಸೇವೆಗಿರುವ ವೈದ್ಯರ ಹುದ್ದೆಗಳನ್ನು ಕಡಿತಗೊಳಿಸಿ ದಾದಿಯರನ್ನು ಹಾಗೂ  ಅಟೆಂಡರ್‌ಗಳನ್ನು ನೇಮಿಸಲಾಗಿದೆ. ಸರಕಾರದಿಂದ ಹಣ ಮಂಜೂರು ಗೊಳ್ಳದಿರುವುದೇ ಕಟ್ಟಡ ನಿರ್ಮಾಣ ಕಾಮಗಾರಿ ಮೊಟಕುಗೊಳ್ಳಲು ಕಾರಣವೆಂದು ಹೇಳಲಾಗಿದೆ. ಇದರಿಂದ ಗುತ್ತಿಗೆ  ಪಡೆದುಕೊಂಡ ಕಂಪೆನಿ ಕೆಲಸ ಉಪೇಕ್ಷಿಸಿ ಮರಳಿದೆ. ಇನ್ನು ಹೊಸ ಗುತ್ತಿಗೆದಾರರು ಕೆಲಸ ಆರಂಭಿಸಬೇಕಾದರೆ  ಇನ್ನಷ್ಟು ಸಮಯ ಕಾಯಬೇಕಾಗಿದೆ. ಇಷ್ಟೆಲ್ಲಾ ಕ್ರಮಗಳು ಪೂರ್ಣಗೊಂಡು  ಕಾಮಗಾರಿ ಆರಂಭಗೊಂಡರೂ ಕಟ್ಟಡ ನಿರ್ಮಾಣಗೊಳ್ಳಲು ಇನ್ನು ಹಲವು ವರ್ಷಗಳು ಬೇಕಾಗಿಬರಲಿದೆ. ಇದೇ ವೇಳೆ ಕಾಸರಗೋಡು ಮೆಡಿಕಲ್ ಕಾಲೇಜಿನೊಂದಿಗೆ  ಘೋಷಿಸಲಾದ ಪತ್ತನಂತಿಟ್ಟ, ಇಡುಕ್ಕಿ, ಮಲಪ್ಪುರಂ ಜಿಲ್ಲೆಗಳ ಮೆಡಿಕಲ್ ಕಾಲೇಜುಗಳು ನಿರ್ಮಾಣಗೊಂಡು ಅಲ್ಲಿ ಚಿಕಿತ್ಸೆ ಹಾಗೂ ಎಂ.ಬಿ.ಬಿ.ಎಸ್ ಶಿಕ್ಷಣ ಆರಂಭಗೊಂಡಿರುತ್ತದೆ. ಆದರೆ ಕಾಸರಗೋಡು ಮೆಡಿಕಲ್ ಕಾಲೇಜಿನ ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗಲು  ಕಾರಣ ಕಾಸರಗೋಡು ಜಿಲ್ಲೆಯೊಂದಿಗೆ ಅಧಿಕಾರಿಗಳು ತೋರಿಸುವ ಅವಗಣನೆಯೇ ಆಗಿದೆಯೆಂಬ ಆರೋಪ ತೀವ್ರಗೊಂಡಿದೆ.

ಕಾಸರಗೋಡು ಜಿಲ್ಲೆ ಆರೋಗ್ಯರಂಗದಲ್ಲಿ ಭಾರೀ ಹಿಂದುಳಿದಿರುವಾಗಲೇ ಇಲ್ಲಿನ  ಮೆಡಿಕಲ್ ಕಾಲೇಜಿನ ಕಾಮಗಾರಿ ಶೀಘ್ರ ಪೂರ್ತಿಗೊಳಿಸಿ ಜನರಿಗೆ ಅದರ ಪ್ರಯೋಜನ ದೊರಕಿಸಿಕೊಡುವ ಬಗ್ಗೆ ಅಧಿಕಾರಿಗಳಿಂದ  ಯಾವುದೇ  ಕ್ರಮಗಳಿಲ್ಲ. ಕೇವಲ ಕಟ್ಟಡ ನಿರ್ಮಿಸಿ ಅದನ್ನು ಅಸ್ಥಿಪಂಜರದಂತೆ ಉಳಿಸಿಕೊಂಡರೆ ಜನರಿಗೆ ಯಾವುದೇ ಪ್ರಯೋಜನವಿಲ್ಲದಾಗಿದೆಯೆಂಬ ಆರೋಪ ಜನರಿಂದ ಕೇಳಿಬರುತ್ತಿದೆ. ಎರಡು ವರ್ಷಗಳ ಕಾಲ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕವೇ ಎಂಬಿಬಿಎಸ್ ಕೋರ್ಸ್ ಆರಂಭಿಸಲು ಸಾಧ್ಯವಿದೆ. ಆದ್ದರಿಂದ ಕಟ್ಟಡ ನಿರ್ಮಾಣ ಪೂರ್ತಿಗೊಳಿಸಿ  ಚಟುವಟಿಕೆ ಆರಂಭಗೊಳ್ಳಲು ವಿಳಂಬವುಂಟಾದರೆ ಕೋರ್ಸ್ ಆರಂಭಗೊಳ್ಳಲು ಇನ್ನಷ್ಟು ಸಮಯ ಕಾಯಬೇಕಾಗಿ ಬರಲಿದೆ.

Leave a Reply

Your email address will not be published. Required fields are marked *

You cannot copy content of this page