ಉಗ್ರನಿಗ್ರಹ ದಳ, ಪೊಲೀಸರಿಂದ ನಿನ್ನೆ ರಾತ್ರಿಯಿಂದ ವ್ಯಾಪಕ ದಾಳಿ: 27 ಬಾಂಗ್ಲಾದೇಶ ಪ್ರಜೆಗಳ ಸೆರೆ
ಕಾಸರಗೋಡು: ಬಾಂಗ್ಲಾದೇಶ ದಿಂದ ಅಕ್ರಮವಾಗಿ ಭಾರತದೊಳಗೆ ನುಗ್ಗಿ ನಕಲಿ ಭಾರತೀಯ ಗುರುತು ಚೀಟಿಗಳೊಂದಿಗೆ ಕೇರಳದಲ್ಲಿ ನೆಲೆಸಿ ರುವ ಬಾಂಗ್ಲಾ ದೇಶದ ಪ್ರಜೆಗಳ ಪತ್ತೆಗಾಗಿ ರಾಜ್ಯ ಉಗ್ರನಿಗ್ರಹದಳ ಮತ್ತು ಪೊಲೀಸರು ನಿನ್ನೆ ರಾತ್ರಿಯಿಂದ ರಾಜ್ಯ ವ್ಯಾಪಕ ದಾಳಿ ಆರಂಭಿಸಿದ್ದು ಅದರಂತೆ 27 ಬಾಂಗ್ಲಾ ಪ್ರಜೆಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
‘ಕ್ಲೀನ್ ರೂರಲ್’ ಎಂಬ ಹೆಸರಲ್ಲಿ ಈ ಜಂಟಿ ಕಾರ್ಯಾಚರಣೆ ಆರಂಭಿ ಸಲಾಗಿದ್ದು ಅದರಂತೆ ಕೊಚ್ಚಿ ಯಿಂದ ೨೭ ಬಾಂಗ್ಲಾ ಪ್ರಜೆಗಳನ್ನು ಪತ್ತೆಹಚ್ಚಿ ಸೆರೆಹಿಡಿಯಲಾಗಿದೆ. ನಿನ್ನೆ ಯಿಂದ ಈ ಕಾರ್ಯಾಚರಣೆ ಆರಂಭಿಸಲಾಗಿದ್ದು, ಅದು ಇನ್ನೂ ಮುಂದುವರಿಯುತ್ತಿದೆ. ಈ ೨೭ ಮಂದಿ ಕೊಚ್ಚಿಯ ಮುನಂಬಂ ಲೇಬರ್ ಶಿಬಿರದಲ್ಲಿ ಅಕ್ರಮವಾಗಿ ನೆಲೆಸಿದ್ದರು. ಇವರು ನಕಲಿ ಭಾರತೀಯ ಗುರುತುಚೀಟಿಗಳನ್ನು ಹೊಂದಿದ್ದು, ಅದನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಲಸೆ ಕಾರ್ಮಿಕರ ಸೋಗಿನಲ್ಲಿ ಇವರು ಮುನಂಬಂ ಲೇಬರ್ ಕ್ಯಾಂಪ್‌ನಲ್ಲಿ ತಿಂಗಳುಗಳಿಂದ ನೆಲೆಸಿ ಕೂಲಿ ಕಾರ್ಮಿಕರಾಗಿ ದುಡಿಯು ತ್ತಿದ್ದರು. ಈ ಶಿಬಿರದಲ್ಲಿ ನೆಲೆಸಿದ್ದ ೫೦ರಷ್ಟು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂ ಡಿದ್ದರು. ಅದರಲ್ಲಿ 23 ಕಾರ್ಮಿಕರು ಹೊರರಾಜ್ಯದ ಕಾರ್ಮಿಕರಾಗಿರುವುದು ಸ್ಪಷ್ಟಗೊಂಡಿದ್ದು, ಅದರಿಂದಾಗಿ ಅವರನ್ನು ಬಳಿಕ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಬಾಕಿ 27 ಮಂದಿ ಬಾಂಗ್ಲಾ ದೇಶದ ಪ್ರಜೆಗಳಾಗಿರುವುದಾಗಿ ಸ್ಪಷ್ಟಗೊಂಡಿದ್ದು, ಅದರಿಂದ ಅವರನ್ನು ಉಗ್ರನಿಗ್ರಹದಳ ಮತ್ತು ಪೊಲೀಸರು ವಶಕ್ಕೆ ತೆಗೆದು ಕೊಂಡು ತೀವ್ರ ವಿಚಾರಣೆಗೊಳಪಡಿಸುತ್ತಿ ದ್ದಾರೆ. ಇವರು ಯಾವುದಾದರೂ ಭಯೋ ತ್ಪಾದಕ ಸಂಘಟನೆಗೆ ಸೇರಿದವರಾಗಿದ್ದಾ ರೆಯೇ, ಭಾರತದೊಳಗೆ ಅಕ್ರಮವಾಗಿ ನುಸುಳಲು ಹಾಗೂ ಅವರಿಗೆ ನಕಲಿ ಭಾರತೀಯ ಗುರುತುಚೀಟಿ ನೀಡಿದ ವರು ಯಾರು ಹಾಗೂ ಅದರ ಉದ್ದೇ ಶದ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನೊಂದೆಡೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಕೇಂದ್ರ ಗುಪ್ತಚರ ವಿಭಾಗಗಳಲ್ಲಿ ಈ ಬಗ್ಗೆ ಸಮಾನಾಂತರ ತನಿಖೆ ಆರಂಭಿಸಿದೆ.
ಅಲ್‌ಖೈದಾ ಭಯೋತ್ಪಾದಕರ ಸಂಘಟನೆಯ ಸದಸ್ಯನೋರ್ವನನ್ನು ಅಸ್ಸಾಂ ಪೊಲೀಸರು ಇತ್ತೀಚೆಗಷ್ಟೇ ಹೊಸದುರ್ಗದ ಪಡನ್ನಕ್ಕಾಡಿನಿಂದ ಬಂಧಿಸಿದ್ದರು. ಬಾಂಗ್ಲಾದೇಶದಿಂದ ಭಾರತದೊಳಗೆ ಅಕ್ರಮವಾಗಿ ನುಗ್ಗಿ ಭಾರತದಲ್ಲಿ ಕೆಲವು ಸಮುದಾಯಕ್ಕೆ ಸೇರಿದ ಮುಖಂಡರನ್ನು ಕೊಂದು ಆ ಮೂಲಕ ದೇಶದಲ್ಲಿ ಅರಾಜಕತೆ ಹಾಗೂ ಗಲಭೆ ಸೃಷ್ಟಿಸಿ ಅದರ ಮರೆಯಲ್ಲಿ ತಮ್ಮ ಬೇಳೆ ಬೇಯಿಸುವ ಉದ್ದೇಶದಿಂದ ಈ ಉಗ್ರ ಕಾಸರಗೋಡಿಗೆ ವಲಸೆ ಕಾರ್ಮಿಕನ ಸೋಗಿನಲ್ಲಿ ಬಂದು ಇಲ್ಲಿ ಭೂಗತವಾಗಿ ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಚು ಹೂಡುತ್ತಿದ್ದನು. ಆತ ಬಂಧಿಸಲ್ಪಟ್ಟ ಬೆನ್ನಲ್ಲೇ ಕೇರಳದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳ ಪತ್ತೆಗಾಗಿರುವ ಇಂತಹ ಕಾರ್ಯಾಚರಣೆಗೆ ಪೊಲೀಸರು ಚಾಲನೆ ನೀಡಿದ್ದಾರೆ.