ಉಜಾರು-ಪುಳಿಕುಂಡ್ ರಸ್ತೆ ಶೋಚನೀಯ: ನಾಗರಿಕರು ಸಂಕಷ್ಟದಲ್ಲಿ
ಕುಂಬಳೆ: ಶಾಲಾ ವಿದ್ಯಾರ್ಥಿಗಳ ಸಹಿತ ನೂರಾರು ಮಂದಿ ಪ್ರತಿದಿನ ನಡೆದಾಡುವ ರಸ್ತೆಯೊಂದು ಹೊಂಡಗಳಿಂದ ತುಂಬಿಕೊಂಡು ಕೆಸರುಗದ್ದೆಯಂತಾಗಿದೆ. ಕುಂಬಳೆ ಪಂಚಾಯತ್ನ ಕೊಡ್ಯಮ್ಮೆ ವಾರ್ಡ್ನಲ್ಲಿರುವ ಉಜಾರು-ಪುಳಿಕ್ಕುಂಡ್ ರಸ್ತೆಯ ಸ್ಥಿತಿ ಇದಾಗಿದೆ. ಕಳೆದ ಎರಡು ವರ್ಷಗಳಿಂದ ರಸ್ತೆಯ ಸ್ಥಿತಿ ಇದಾಗಿದ್ದರೂ ಇದರ ದುರಸ್ತಿಗೆ ಜನ ಪ್ರತಿನಿಧಿಗಳೋ, ಅಧಿಕಾರಿಗಳೋ ಗಮನಹರಿಸುತ್ತಿಲ್ಲವೆಂದು ನಾಗರಿಕರು ದೂರುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಈ ರಸ್ತೆಗೆ ಡಾಮರೀಕರಣ ನಡೆದಿತ್ತು. ಅನಂತರ ಯಾವುದೇ ಅಭಿವೃದ್ಧಿ ನಡೆದಿಲ್ಲ. ಸುಮಾರು ೨೦೦ ಮೀಟರ್ ರಸ್ತೆ ಶೋಚನೀಯಾವಸ್ಥೆಯಲ್ಲಿದೆ. ಕೆಳಗಿನ ಕೊಡ್ಯಮ್ಮೆ, ಛತ್ರಂಪಳ್ಳ, ಕೊಡ್ಯಮ್ಮೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಮೊದಲಾದೆಡೆ ತೆರಳಲು ಇದೇ ರಸ್ತೆಯಲ್ಲಿ ಸಾಗಬೇಕಾಗಿದೆ. ಶೋಚನೀಯ ರಸ್ತೆಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರಕ್ಕೆ ಅಸಾಧ್ಯವಾಗಿದೆ. ಅಲ್ಲದೆ ಈ ರಸ್ತೆಯಲ್ಲಿ ಈ ಹಿಂದೆ ಸ್ಥಾಪಿಸಲಾಗಿದ್ದ ಬೀದಿ ದೀಪಗಳು ಇದೀಗ ಉರಿಯುತ್ತಿಲ್ಲ. ಅದ್ದರಿಂದ ಈ ರಸ್ತೆಯನ್ನು ಹಾಗೂ ಬೀದಿ ದೀಪಗಳನ್ನು ಶೀಘ್ರ ದುರಸ್ತಿಗೊಳಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.