ಉತ್ತಮ ನಾಗರಿಕನಾಗಿ ಬೆಳೆಯಲು ವಿದ್ಯಾಭ್ಯಾಸ ವೇತನ ಪೂರಕವಾಗಿರಲಿ-ಅಜಿತ್ ಕುಮಾರ್ ರೈ

ಉಪ್ಪಳ: ಮಕ್ಕಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿ ಉತ್ತಮ  ನಾಗರಿಕರಾಗಿ ಜೀವನವನ್ನು ರೂಪಿಸಲು ಬಂಟರ ಸಂಘ ನೀಡುತ್ತಿರುವ ವಿದ್ಯಾರ್ಥಿ ವೇತನ ಪೂರಕವಾಗಿರಲೆಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಭಿಪ್ರಾಯಪಟ್ಟರು.  ಅವರು ಕಾಸರಗೋಡು  ಜಿಲ್ಲಾ ಬಂಟರ ಸಂಘ ಮತ್ತು ಬೆಂಗಳೂರು ಬಂಟರ ಸಂಘದ ಸಹಯೋಗದಲ್ಲಿ ಉಪ್ಪಳ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರು ಬಂಟರ ಸಂಘದ ವಿದ್ಯಾರ್ಥಿವೇತನ ವಿತರಣಾ ಸಮಿತಿ ಅಧ್ಯಕ್ಷ ಸದಾನಂದ ಸುಲಾಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಮಾಜದ ವಿದ್ಯಾರ್ಥಿಗಳು ಐಪಿಎಸ್, ಐಎಎಸ್ ಉನ್ನತ ಶಿಕ್ಷಣವನ್ನು ಪಡೆದು ಬಂಟ ಸಮಾಜದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ನುಡಿದರು. ಸಂಘದ ಅಧ್ಯಕ್ಷ ಬಿ. ಸುಬ್ಬಯ್ಯ ರೈ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಭಾಗವಹಿಸಿ ಈ ತಿಂಗಳ ೨೮ ಮತ್ತು ೨೯ ದಿನಾಂಕಗಳಲ್ಲಿ ಉಡುಪಿಯಲ್ಲಿ ನಡೆಯುವ ವಿಶ್ವ ಬಂಟರಸಮ್ಮೇಳನ ಕಾರ್ಯಕ್ರಮದ ವಿವರಣೆಯನ್ನು ನೀಡ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ ಶೆಟ್ಟಿ ಕುಚ್ಚಿಕ್ಕಾಡು, ಕುಂಬಳೆ ಫಿರ್ಕಾ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿದರು. ಪ್ರಧಾನ  ಕಾರ್ಯದರ್ಶಿ ಮೋಹನ್ ರೈ ಕೆ ಸ್ವಾಗತಿಸಿ, ಕೋಶಾಧಿಕಾರಿ ಚಿದಾನಂದ ಆಳ್ವ ವಂದಿಸಿದರು. ಶ್ಯಾಮಲಾ ಶೆಟ್ಟಿ, ಚಂದ್ರಹಾಸ ರೈ ಪಿಜಿ, ಕಿರಣ ಮಾಡ  ಹೊಸಮನೆ ಉಪಸ್ಥಿತರಿದ್ದರು. ಸುಧೀರ್ ಕುಮಾರ್ ರೈ ನಿರೂಪಿಸಿದರು.

Leave a Reply

Your email address will not be published. Required fields are marked *

You cannot copy content of this page