ಉಪ್ಪಳದಲ್ಲಿ ಫ್ಲಾಟ್ ಮುಂಭಾಗದಿಂದ ಸ್ಕೂಟರ್ ಕಳವು: ಮತ್ತೆರಡು ವಾಹನಗಳ ಕಳವು ಯತ್ನ ವಿಫಲ

ಕುಂಬಳೆ: ಉಪ್ಪಳದಿಂದ ಸ್ಕೂಟರ್‌ವೊಂದು ಕಳವಿಗೀಡಾಗಿದ್ದು, ಮತ್ತೆರಡು ವಾಹನಗಳನ್ನು ಕಳವುಗೈಯ್ಯಲು ನಡೆಸಿದ ಯತ್ನ ವಿಫಲಗೊಂಡಿದೆ.

ಉಪ್ಪಳ ಹನಫಿ ಬಜಾರ್‌ನಲ್ಲಿ ಫ್ಲಾಟ್‌ವೊಂದರ  ಮುಂಭಾಗದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಮೊನ್ನೆ ರಾತ್ರಿ ಕಳವಿಗೀಡಾಗಿದೆ. ಅದೇ ಫ್ಲಾಟ್‌ನಲ್ಲಿ ವಾಸಿಸುವ ಅಬ್ದುಲ್ ಮಜೀದ್ ಕೋಟ ಎಂಬವರ ಸ್ಕೂಟರನ್ನು ಕಳ್ಳರು ಕದ್ದೊಯ್ದಿದ್ದಾರೆ. ಮೊನ್ನೆ ರಾತ್ರಿ ಸ್ಕೂಟರನ್ನು ಫ್ಲಾಟ್‌ನ ಮುಂಭಾಗದಲ್ಲಿ ನಿಲ್ಲಿಸಲಾಗಿತ್ತು. ನಿನ್ನೆ ಬೆಳಿಗ್ಗೆ ನೋಡಿದಾಗ ಅದು ನಾಪತ್ತೆಯಾಗಿದೆ. ಈ ಬಗ್ಗೆ  ಅಬ್ದುಲ್ ಮಜೀದ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ವೇಳೆ ಇದೇ ಫ್ಲಾಟ್ ಸಮೀಪ  ನಿಲ್ಲಿಸಿದ್ದ ಮತ್ತೆರಡು  ವಾಹನಗಳನ್ನು ಕದ್ದೊಯ್ಯಲು ಕಳ್ಳರು ಯತ್ನಿಸಿ ವಿಫಲರಾಗಿದ್ದಾರೆ. ಇದೇ ಫ್ಲಾಟ್‌ನಲ್ಲಿ  ವಾಸಿಸುವ ಅಬ್ದುಲ್  ರಹ್ಮಾನ್ ಎಂಬವರ  ಕಾರಿನ ಲಾಕ್ ಮುರಿದಿದ್ದು, ಆದರೆ ಅದನ್ನು ಕೊಂಡೊಯ್ಯಲು ಕಳ್ಳರಿಗೆ ಸಾಧ್ಯವಾಗಿಲ್ಲ.  ಅದೇ ರೀತಿ ಇದೇ ಪರಿಸರದಲ್ಲಿ ನಿಲ್ಲಿಸಿದ್ದ ಬೈಕ್‌ವೊಂದರ ಹ್ಯಾಂಡ್ ಲಾಕ್ ಕೂಡಾ ಮುರಿಯಲಾಗಿದ್ದು, ಆದರೆ ಅದನ್ನು ಕೊಂಡೊಯ್ಯಲು ಸಾಧ್ಯವಾಗದೆ ಕಳ್ಳರು ವಿಫಲಗೊಂಡಿದ್ದಾರೆ.

ಈ ಎಲ್ಲಾ ಘಟನೆಗಳ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ತೀವ್ರಗೊಳಿಸುತ್ತಿದ್ದಾರೆ. ಈ ಕಳವು ಕೃತ್ಯದಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿಯಿರಬಹುದೆಂದು ಪೊಲೀಸರು ಸಂಶಯಿಸಿದ್ದಾರೆ. ಒಂದೇ ರಾತ್ರಿಯಲ್ಲಿ ಒಂದು ಸ್ಕೂಟರ್ ಕಳವು ನಡೆಸಿ ಮತ್ತೆರಡು ವಾಹನಗಳನ್ನು  ಕಳವುಗೈಯ್ಯಲು ಯತ್ನ ನಡೆದಿರುವುದರ ಹಿಂದೆ ಭಾರೀ ಕಳ್ಳರು ಭಾಗಿಯಾಗಿದ್ದಾರೆಂದೂ ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಪರಿಸರದ ಸಿಸಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page