ಉಪ್ಪಳದಿಂದ 50 ಲಕ್ಷ ರೂ. ಕಳವುಗೈದ ಪ್ರಕರಣ: ಕಾಸರಗೋಡು ರೈಲು ನಿಲ್ದಾಣದಲ್ಲಿ ಆರೋಪಿಗಳ ದೃಶ್ಯ ಪತ್ತೆ

ಕಾಸರಗೋಡು: ಮಾರ್ಚ್ ೨೭ರಂದು ಅಪರಾಹ್ನ ಉಪ್ಪಳ ಪೇಟೆಯಲ್ಲಿ ಎಟಿಎಂಗೆ ಹಣ ತುಂಬಿಸಲೆಂದು ಬಂದ ವಾಹನದಿಂದ ೫೦ ಲಕ್ಷ ರೂ. ಕಳವು ಗೈದ ಪ್ರಕರಣದ ಆರೋಪಿಗಳ ಸ್ಪಷ್ಟ ದೃಶ್ಯ ಕಾಸರಗೋಡು ರೈಲು ನಿಲ್ದಾಣದ ಸಿಸಿ ಕ್ಯಾಮರಾದಿಂದ ಪೊಲೀಸರಿಗೆ ಲಭಿಸಿದೆ. ೫೦ ಲಕ್ಷ ರೂ. ಕಳವು ಗೈದ ಬಳಿಕ ಆರೋಪಿ ಗಳು ಆ ಹಣದೊಂದಿಗೆ ಆಟೋರಿಕ್ಷಾದಲ್ಲಿ ಕಾಸರ ಗೋಡು ರೈಲು ನಿಲ್ದಾಣಕ್ಕೆ ಬಂದಿದ್ದರು. ಆ ವೇಳೆ ರೈಲು ನಿಲ್ದಾಣದ ಸಿಸಿ ಟಿವಿ ಕ್ಯಾಮರಾದಲ್ಲಿ ಅವರ ದೃಶ್ಯ ಮೂಡಿತ್ತು. ಆದರೆ ಕಾಸರಗೋಡು ರೈಲು ನಿಲ್ದಾಣಕ್ಕೆ ಬಂದ ಆರೋಪಿಗಳು ಬಳಿಕ ಅಲ್ಲಿಂದ ಎಲ್ಲಿಗೆ ಹೋಗಿದ್ದಾರೆಂಬ ದೃಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಮೂಡಿ ಬಂದಿಲ್ಲ. ಆದರೂ ಸಿಸಿ ಟಿವಿ ಕ್ಯಾಮರಾ ದೃಶ್ಯದ ಆಧಾರದಲ್ಲಿ ಆರೋಪಿಗಳ ಪತ್ತೆಗಾಗಿರುವ ಶೋಧ ಕಾರ್ಯಾಚರಣೆಯನ್ನು ಪೊಲೀಸರು  ಇನ್ನಷ್ಟು ತೀವ್ರಗೊಳಿಸಿದ್ದಾರೆ.

ಎಟಿಎಂಗೆ ತುಂಬಿಸಲು ತಂದ ವಾಹನದಲ್ಲಿ  ೧.೪೫ ಕೋಟಿ ರೂ. ಇತ್ತು. ಅದರಲ್ಲಿ ೫೦ ಲಕ್ಷ ರೂ.ವನ್ನು ಕಳ್ಳರು ಕದ್ದಿದ್ದರು. ಓರ್ವ ವ್ಯಕ್ತಿ ಬ್ಯಾಗ್‌ನೊಂದಿಗೆ ಅಲ್ಲಿಂದ ನಡೆದುಕೊಂಡು ಹೋಗುತ್ತಿರುವ ದೃಶ್ಯವೂ ಉಪ್ಪಳದ ಸಿಸಿ ಟಿವಿಯೊಂದರಲ್ಲಿ ಅದೇ ದಿನ ಗೋಚರಿಸಿತ್ತು.

ಎಟಿಎಂನಿಂದ  ಹಣ ಕದ್ದ ಆರೋಪಿಗಳು ತಮಿಳುನಾಡಿನ ‘ತಿರುಟ್’ ಕಳ್ಳರ ತಂಡಕ್ಕೆ ಸೇರಿದವರಾಗಿದ್ದಾರೆ. ಇವರು ಅಲೆಮಾರಿ ಕಳ್ಳರ ತಂಡದವರಾಗಿದ್ದಾರೆ. ಉಪ್ಪಳದಲ್ಲಿ ಹಣ ಕಳವುಗೈದ ಅದೇ ತಂಡ ಅದೇ ದಿನದಂದು ಬೆಳಿಗ್ಗೆ ಮಂಗಳೂರಿನ ಕಾರೊಂದರ ಗಾಜು ಒಡೆದು ಅದರಲ್ಲಿದ್ದ ಲ್ಯಾಪ್‌ಟಾಪ್‌ನ್ನು ಕಳವುಗೈದಿತ್ತು. ಆ ಬಗ್ಗೆ ಮಂಗಳೂರು ಪೊಲೀಸರೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಟಿಎಂನಲ್ಲಿ ಹಣ ತುಂಬಿಸುವ ಗುತ್ತಿಗೆಯನ್ನು ಮುಂಬೈಯ ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಿಕೊಡಲಾಗಿತ್ತು. ಆ ಸಂಸ್ಥೆಯ ವಾಹನದಿಂದಲೇ ಉಪ್ಪಳದಲ್ಲಿ ಹಣ ಕಳವುಗೈಯ್ಯಲಾಗಿತ್ತು.

Leave a Reply

Your email address will not be published. Required fields are marked *

You cannot copy content of this page