ಉಪ್ಪಳ ಬಸ್ ನಿಲ್ದಾಣ ಪ್ರವೇಶ ಸೂಚನಾ ಫಲಕ ಸ್ಥಾಪಿಸಲು ಆಗ್ರಹ
ಉಪ್ಪಳ: ಹೆದ್ದಾರಿಯಲ್ಲಿ ಸಾಗುವ ಸಾರಿಗೆ ಬಸ್‌ಗಳು ಉಪ್ಪಳ ಬಸ್ ನಿಲ್ದಾಣವನ್ನು ಪ್ರವೇಶಿಸುವ ವೇಳೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದ್ದು, ಇದನ್ನು ತಪ್ಪಿಸಲು ಹೆದ್ದಾರಿ ಬದಿ ಸೂಚನಾ ಫಲಕವನ್ನು ಸ್ಥಾಪಿಸ ಬೇಕೆಂದು ಸಾರ್ವಜನಿಕರು ಆಗ್ರಹಿಸಿ ದ್ದಾರೆ. ಉಪ್ಪಳ ಬಸ್ ನಿಲ್ದಾಣದಲ್ಲಿ ಸ್ಥಳದ ಕೊರತೆಯೂ ಇದ್ದು, ವಾಹನಗಳು ಹೆದ್ದಾರಿಯಿಂದ ನಿಲ್ದಾಣಕ್ಕೂ, ನಿಲಾಣದಿಂದ ಹೆದ್ದಾರಿಗೂ ಪ್ರವೇಶಿಸು ವಾಗ ಸಮಸ್ಯೆ ಉಂಟಾಗುತ್ತಿದೆ.
ಹೆದ್ದಾರಿಯಲ್ಲಿ ಸಂಚರಿಸುವ ಬಸ್‌ಗಳು ಉಪ್ಪಳ ನಿಲ್ದಾಣವನ್ನು ಪ್ರವೇಶಿಸುವಾಗ ಹಿಂದಿನಿಂದ ಬರುವ ವಾಹನಗಳಿಗೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುತ್ತಿದೆ ಎಂದು ಸ್ಥಳೀಯರು ತಿಳಿಸುತ್ತಾರೆ. ಹೆದ್ದಾರಿ ಬದಿಯಲ್ಲಿ ಸೂಚನಾ ಫಲಕ ಸ್ಥಾಪಿಸಿದರೆ ಇದಕ್ಕೆ ಅಲ್ಪ ಪರಿಹಾರವಾಗಬಹುದೆಂದು ಅವರು ಸೂಚಿಸುತ್ತಾರೆ.
ಕಾಸರಗೋಡು, ಮಂಗಳೂರು, ಪೆರ್ಮುದೆ, ಮೀಯಪದವು, ಬಾಯಾರು ಸಹಿತ ವಿವಿಧ ಕಡೆಗಳಿಂದಾಗಿ ಹಲವು ಬಸ್‌ಗಳು ಈ ನಿಲ್ದಾಣ ಪ್ರವೇಶಿಸುತ್ತವೆ. ಈ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಸೌಕರ್ಯ ಹೆಚ್ಚಿಸಬೇಕು, ಸೂಚನಾ ಫಲಕ ಸ್ಥಾಪಿಸಬೇಕೆಂದು ಸ್ಥಳೀಯರು ಪಂಚಾಯತ್ ಅಧಿಕಾರಿಯಲ್ಲಿ ಆಗ್ರಹಿಸಿದ್ದಾರೆ.