ಎಂಡೋಸಲ್ಫಾನ್ ಪುನರ್ವಸತಿ ಗ್ರಾಮ ಕೇರಳದ ಮಾದರಿ ಯೋಜನೆ-ಸಚಿವೆ ಆರ್. ಬಿಂದು
ಮುಳಿಯಾರು: ಮುಳಿಯಾರು ಪಂಚಾಯತ್ನಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ಪುನರ್ವಸತಿ ಗ್ರಾಮ ಕೇರಳದ ಒಂದು ಮಾದರಿ ಯೋಜನೆಯಾಗಿದೆಯೆಂದು ರಾಜ್ಯ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಖಾತೆ ಸಚಿವೆ ಆರ್. ಬಿಂದು ಹೇಳಿದ್ದಾರೆ. ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಮುಳಿಯಾರಿನಲ್ಲಿ ಆರಂಭಿಸಲಾದ ಸಹಜೀವನ, ಸ್ನೇಹಗ್ರಾಮವನ್ನು ಇಂದು ಬೆಳಿಗ್ಗೆ ಉದ್ಘಾಟಿಸಿ ಸಚಿವೆ ಮಾತನಾಡುತ್ತಿದ್ದರು. ಕ್ಲೀನಿಕಲ್ ಸೈಕಾಲಜಿ ಬ್ಲೋಕ್ ಕನ್ಸಲ್ಟಿಂಗ್ ಆಂಡ್ ಹೈಡ್ರಾಲಜಿ ಬ್ಲಾಕ್ಗಳನ್ನು ಈ ಪುನರ್ವಸತಿ ಗ್ರಾಮ ಯೋಜನೆಯ ಮೊದಲ ಹಂತದಲ್ಲಿ ತೆರೆಯಲಾಗಿದೆ. ೨೦೨೨ ಮೇ ತಿಂಗಳಲ್ಲಿ ಇದರ ನಿರ್ಮಾಣ ಕೆಲಸ ಆರಂಭಗೊಂಡಿತ್ತು. ಇದಕ್ಕಾಗಿ ರಾಜ್ಯ ಸರಕಾರ ೪,೮೯,೫೨,೮೨೯ ರೂ.ಗಳ ಆಡಳಿತಾನುಮತಿ ನೀಡಿದ್ದು, ಅದರಲ್ಲಿ ೪,೪೫,೦೦,೦೦೦ರೂ.ಗಳ ತಾಂತ್ರಿಕ ಅನುಮತಿಯೂ ಲಭಿಸಿತ್ತು. ಇದು ಒಟ್ಟು ೫೮ ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಯಾಗಿದೆ. ೨೫ ಎಕ್ರೆ ಸ್ಥಳವನ್ನು ಈ ಪುನರ್ವಸತಿ ಗ್ರಾಮಕ್ಕಾಗಿ ವಶಪಡಿಸಲಾಗಿದೆ. ಇದರಲ್ಲಿ ಮೊದಲ ಹಂತವಾಗಿ ಹೈಡ್ರೋ ಥೆರಾಫಿ, ಕ್ಲಿನಿಕಲ್ ಸೈಕಾಲಜಿ ಬ್ಲೋಕ್ ಇತ್ಯಾದಿಗಳು ಒಳಗೊಂಡ ನಿರ್ಮಾಣ ಕೆಲಸಗಳು ಈಗಾಗಲೇ ಪೂರ್ಣಗೊಂಡಿದೆ.