ಎಂಡೋಸಲ್ಫಾನ್: ಮಿಂಚಿಪದವು ಸಹಿತ ವಿವಿಧೆಡೆ ಮುಚ್ಚಲಾದ ೫ ಬಾವಿಗಳನ್ನು ಪರಿಶೋಧಿಸುವ ಬಗ್ಗೆ ಇಂದು ಪರಿಗಣನೆ
ಮುಳ್ಳೇರಿಯ: ಎಂಡೋಸಲ್ಫಾನ್ ದುಷ್ಪರಿಣಾಮ ಬೀರಿದ ಪ್ರದೇಶ ವ್ಯಾಪ್ತಿಯಲ್ಲಿರುವ ಪ್ಲಾಂಟೇಶನ್ ಕಾರ್ಪರೇನ್ನ ಗೇರು ತೋಟದಲ್ಲಿ ಮುಚ್ಚಲಾಗಿದೆ ಎನ್ನಲಾದ ಬಾವಿಗಳನ್ನು ಅಗೆದು ಪರಿಶೋಧಿಸಬೇಕೇ ಎಂಬ ವಿಷಯದ ಬಗ್ಗೆ ಇಂದು ನಡೆಯುವ ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ನ ಪೀಠ ಪರಿಶೀಲಿಸಲಿದೆ. ಪ್ಲಾಂಟೇಶನ್ ಕಾರ್ಪರೇಶನ್ನ ಕಾಸರಗೋಡು ಎಸ್ಟೇ ಟ್ನಲ್ಲಿ ಮುಚ್ಚಲಾದ ಐದು ಬಾವಿಗಳನ್ನು ಅಗೆದು ಪರಿಶೋಧಿಸಬೇಕೆಂದು ಕೇಂದ್ರ ತಂಡ ವರದಿ ನೀಡಿತ್ತು. ಆದರೆ ಮುಳ್ಳೇ ರಿಯ ಬಳಿಯ ಮಿಂಚಿಪದವಿನ ಪ್ಲಾಂ ಟೇಶನ್ನ ಸ್ಥಳದಲ್ಲಿ ಎಂಡೋಸಲ್ಫಾನ್ ಹೂತು ಹಾಕಿಲ್ಲವೆಂದೂ ಮುಚ್ಚುಗಡೆ ಗೊಳಿಸಿದ ಬಾವಿಗಳನ್ನು ಅಗೆದು ಪರಿಶೋಧಿಸುವುದರಲ್ಲಿ ಯಾವುದೇ ಅಡ್ಡಿಯಿಲ್ಲವೆಂದು ಪ್ಲಾಂಟೇಶನ್ ಕಾರ್ಪರೇಶನ್ ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ಗೆ ತಿಳಿಸಿರುತ್ತದೆ. ಆದ್ದರಿಂದ ಈ ವಿಷಯದ ಬಗ್ಗೆ ಇಂದು ನಡೆಯುವ ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ ಪೀಠ ನಿರ್ಧರಿಸಲಿದೆ ಎಂದು ತಿಳಿದು ಬಂದಿದೆ. ಮುಳಿಯಾರಿನ ಚೋಕೆಮೂಲೆ ಬ್ಲಾಕ್ನಲ್ಲಿ ಉಪಯೋಗ ಶೂನ್ಯವಾಗಿದ್ದ ಆವರಣರಹಿತ ಬಾವಿಗೆ ಓರ್ವೆ ಕಾರ್ಮಿಕೆ ಬಿದ್ದು ಮೃತಪಟ್ಟ ಹಿನ್ನೆಲೆ ಯಲ್ಲಿ ಅಂತಹ ಐದು ಬಾವಿಗಳನ್ನು ಮುಚ್ಚಲಾಗಿತ್ತೆಂದೂ ಆದ್ದರಿಂದ ಸಂಶಯನಿವಾರಣೆಗಾಗಿ ಆ ಐದು ಬಾವಿಗಳ ಪರಿಶೋಧನೆ ನಡೆಸುವುದಕ್ಕೆ ಯಾವುದೇ ಅಡ್ಡಿ ಇಲ್ಲವೆಂದು ಕಾರ್ಪರೇಶನ್ ತಿಳಿಸಿತ್ತು. ಎಂಡೋ ಸಲ್ಫಾನ್ ನಿಷೇಧಿಸಿದ ಸಮಯದಲ್ಲಿ ಪ್ಲಾಂಟೇಶನ್ ಕಾರ್ಪರೇಶನ್ ಗೋ ದಾಮುನಲ್ಲಿ ಉಳಿದಿದ್ದ ಕೀಟನಾಶಕ ವನ್ನು ಮಿಂಚಿಪದವಿನ ಪ್ಲಾಂಟೇಶನ್ ಭೂಮಿಯಲ್ಲಿ ಉಪಯೋಗಶೂನ್ಯ ವಾದ ಬಾವಿಯಲ್ಲಿ ಸುರಿದು ಮುಚ್ಚಲಾ ಗಿದೆಯೆಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಅಲ್ಲದೆ ಮಿಂಚಿಪದವಿಗೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಪ್ರದೇಶದಲ್ಲೂ ಎಂಡೋಸಲ್ಫಾನ್ ದುಷ್ಪರಿಣಾಮ ಬೀರಿದೆ ಎಂಬ ಆರೋಪವು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಲು ಕೇಂದ್ರ ಮಲಿನೀಕರಣ ನಿಯಂತ್ರಣ ಮಂಡಳಿ ದಕ್ಷಿಣ ವಲಯ ರೀಜಿನಲ್ ಡೈರೆಕ್ಟರ್ ಡಾ. ಜೆ. ಚಂದ್ರಬಾಬು ನೇತೃತ್ವದ ತಂಡ ವನ್ನು ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ ನೇಮಿಸಿತ್ತು. ಇದರಂತೆ ತಂಡ ಮಿಂಚಿ ಪದವಿಗೆ ಭೇಟಿ ನೀಡಿ ನಾಗರಿಕರಿಂದ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಿತ್ತು. ಆ ವರದಿಯಲ್ಲಿ ಪ್ಲಾಂಟೇಶನ್ ಕಾರ್ಪ ರೇಶನ್ ಎಸ್ಟೇಟ್ನಲ್ಲಿ ಮುಚ್ಚುಗಡೆ ಗೊಳಿಸಿದ ಐದು ಬಾವಿಗಳನ್ನು 100 ಅಡಿ ಆಳದಲ್ಲಿ ಅಗೆದು ಪರಿಶೋಧಿ ಸಬೇಕೆಂದು ತಿಳಿಸಲಾಗಿತ್ತು.
ಇದೇ ವೇಳೆ ಮಿಂಚಿಪದವಿನಲ್ಲಿ ಮುಚ್ಚುಗಡೆಗೊಳಿಸಿದ ಒಂದು ಬಾವಿಯ ಮೇಲ್ಭಾಗದಿಂದ ಸಂಗ್ರಹಿಸಿದ ಮಣ್ಣು ಹಾಗೂ ಪ್ಲಾಂಟೇಶನ್ನ ಕಾರ್ಪರೇಶನ್ ಕಚೇರಿ ಬಳಿಯ ಬಾವಿಯಿಂದ ಸಂಗ್ರಹಿಸಿದ ನೀರನ್ನು ಕೇಂದ್ರ ಮಲಿನೀಕರಣ ನಿಯಂತ್ರಣ ಮಂಡಳಿ ಯ ಲ್ಯಾಬ್ನಲ್ಲಿ ತಪಾಸಣೆ ನಡೆಸಿದ್ದು, ಈ ವೇಳೆ ಅದರಲ್ಲಿ ಎಂಡೋಸಲ್ಫಾನ್ ಅಂಶ ಪತ್ತೆಹಚ್ಚಲು ಸಾದ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.