ಎಡ-ಐಕ್ಯರಂಗ ಒಕ್ಕೂಟ ಕೇರಳವನ್ನು ದರೋಡೆಗೈಯ್ಯುತ್ತಿದೆ, ಭ್ರಷ್ಟಾಚಾರಿಗಳನ್ನು ಜೈಲಿಗಟ್ಟಲಾಗುವುದು-ಪ್ರಧಾನಿ

ತಿರುವನಂತಪುರ: ಎಡರಂಗ ಮತ್ತು ಐಕ್ಯರಂಗ ಕೇರಳವನ್ನು ದರೋಡೆ ಗೈಯ್ಯುತ್ತಿದೆಯೆಂದು ಪ್ರಧಾನಮಂತ್ರಿ ನರೇಂದ್ರಮೋದಿ ಆರೋಪಿಸಿದ್ದಾರೆ. ತಿರುವನಂತಪುರದ  ಕಾಟ್ಟಾಕಡ ಮತ್ತು ತೃಶೂರಿನ ಕುನ್ನಂಕುಳದಲ್ಲಿ ನಿನ್ನೆ ನಡೆದ   ಎನ್‌ಡಿಎ ಚುನಾವಣಾ  ರ‍್ಯಾಲಿಯಲ್ಲಿ ಭಾಗವಹಿಸಿ ಮೋದಿ ಮಾತ ನಾಡುತ್ತಿದ್ದರು.

ಭ್ರಷ್ಟಾಚಾರ ನಡೆಸುವ ವಿಷಯದಲ್ಲಿ ಕಾಂಗ್ರೆಸ್ ಮತ್ತು  ಕಮ್ಯೂನಿಷ್ಟರು ಪರಸ್ಪರ ಪೈಪೋಟಿಯಲ್ಲಿ ತೊಡಗಿದ್ದಾರೆ.  ಈ ಎರಡೂ ರಾಜಕೀಯ ಪಕ್ಷಗಳು ಆಡಳಿತ ನಡೆಸಿದ  ರಾಜ್ಯಗಳೆಲ್ಲವೂ  ಇಂದು ಅಧೋಗತಿಯತ್ತ ಸಾಗಿದೆ. ಎಡರಂಗ ಮತ್ತು ಐಕ್ಯರಂಗ ಸರಕಾರಗಳು ಆಡಳಿತ ನಡೆಸಿದ ಕೇರಳದ ಸ್ಥಿತಿ ಅದಕ್ಕಿಂತಲೂ ಗಂಭೀರವಾಗಿದೆ. ಭ್ರಷ್ಟಾಚಾರದ ವಿರುದ್ಧ ಕೇಂದ್ರಸರಕಾರ ಕಳೆದ ಹತ್ತು ವರ್ಷದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಾ ಬಂದಿದೆ. ಇದನ್ನು ಸಹಿಸಲಾಗದೆ ಭ್ರಷ್ಟಾಚಾರಿಗಳೆಲ್ಲರೂ ಇಂದು ಒಂದಾಗಿ  ಒಂದೇ ಒಕ್ಕೂಟಕ್ಕೆ ರೂಪು ನೀಡಿ ಕೇಂದ್ರ ಸರಕಾರವನ್ನು ತಡೆಯಲೆತ್ನಿಸುತ್ತಿದೆ. ಎಡರಂಗ ಮತ್ತು ಐಕ್ಯರಂಗಗಳು ಮಾತ್ರವಲ್ಲ ಆ ಒಕ್ಕೂಟಗಳ ನೇತಾರರ ಮೇಲಿರುವ ನಂಬುಗೆಗಳನ್ನು ಜನರು ಈಗ ಕಳೆದುಕೊಂಡಿದ್ದಾರೆ. ಕೇರಳದಲ್ಲಿ ದೊಡ್ಡ ಶತ್ರುಗಳಾಗಿರುವ ಎಡರಂಗ ಮತ್ತು ಐಕ್ಯರಂಗದವರು ಕೇಂದ್ರದಲ್ಲಿ  ಆತ್ಮೀಯ ಸ್ನೇಹಿತರಾಗಿದ್ದಾರೆಂದೂ ಮೋದಿ ಹೇಳಿದ್ದಾರೆ.

ಕೇರಳದಲ್ಲಿ ಮುಖ್ಯಮಂತ್ರಿ ಮಾತ್ರವಲ್ಲ ಅವರ ಮಗಳೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು  ಮೋದಿ ಆರೋಪಿಸಿದ್ದಾರೆ.   ತೃಶೂರು ಜಿಲ್ಲೆಯ ಕರುವನ್ನೂರು ಸಹಕಾರಿ ಬ್ಯಾಂಕ್‌ನ ಹಣ ಲೂಟಿಗೈಯ್ಯಲಾಗಿದೆ. ಇದರಿಂದ ಸಹಸ್ರಾರು ಕುಟುಂಬಗಳು ದುರಿತ ಅನುಭವಿಸಬೇಕಾಗಿ ಬಂದಿದೆ. ಠೇವಣಿ ನಷ್ಟಹೊಂದಿದವರಿಗೆ ಅದನ್ನು  ಹಿಂತಿರುಗಿಸಲಾಗುವುದೆಂದು ಮುಖ್ಯಮಂತ್ರಿ ನೀಡಿರುವ ಭರವಸೆ ಪೊಳ್ಳಾಗಿದೆಯೆಂಬುವುದು ಈಗ ಸಾಬೀತುಗೊಂಡಿದೆ. ಹೀಗೆ ವಂಚನೆ ನಡೆಸಿದವರನ್ನು ಕೇಂದ್ರ ಸರಕಾರ ಸುಮ್ಮನೆಬಿಡದು. ಠೇವಣಿ ನಷ್ಟಗೊಂಡ ಎಲ್ಲರಿಗೂ ಅದನ್ನು   ಹಿಂತಿರುಗಿ ಲಭಿಸುವಂತೆ ಮಾಡುವ ಕ್ರಮ ಕೈಗೊಳ್ಳಲಾಗುವುದೆಂದೂ ಪ್ರಧಾನಮಂತ್ರಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ. ಭ್ರಷ್ಟಾಚಾರ ನಡೆಸಿದವರೆಲ್ಲರೂ ಶೀಘ್ರ ಜೈಲುಸೇರಲಿದ್ದಾರೆಂದು ಅವರು ಹೇಳಿದ್ದಾರೆ. 

Leave a Reply

Your email address will not be published. Required fields are marked *

You cannot copy content of this page