ಎರಡನೇ ದಿನವೂ ಬೋವಿಕ್ಕಾನ ಪೇಟೆಗೆ ಬಂದ ಚಿರತೆ: ಸಾಕು ನಾಯಿಗಳ ಮೇಲೆ ದಾಳಿ ; ನಾಗರಿಕರಿಂದ ಚಳವಳಿ ಸಿದ್ಧತೆ
ಬೋವಿಕ್ಕಾನ: ಬೋವಿಕ್ಕಾನ ಪೇಟೆಯಲ್ಲಿ ನಿರಂತರ ವಾಗಿ ಎರಡನೇ ದಿನವೂ ಚಿರತೆ ಕಾಣಿಸಿಕೊಂಡಿದೆ. ಬೋವಿಕ್ಕಾನ ಪೇಟೆ ಬಳಿಯಿರುವ ಅರಣ್ಯ ಇಲಾಖೆ ಕಚೇರಿ ಸಮೀಪದ ಲ್ಲಾಗಿ ಸಾಗಿದ ಚಿರತೆ ರಸ್ತೆಯಲ್ಲಿ ಮುಂದುವರಿದಿದೆ. ಬಳಿಕ ಮಸೀದಿ ಸಮೀಪದಲ್ಲಾಗಿ ಸಾಗುತ್ತಿರುವುದನ್ನು ಅಬ್ದುಲ್ ಖಾದರ್ ಎಂಬವರು ಕಂಡಿದ್ದಾರೆನ್ನಲಾಗಿದೆ. ಅಲ್ಲದೆ ಸ್ಕೂಟರ್‌ನಲ್ಲಿ ಸಂಚರಿ ಸುತ್ತಿದ್ದ ಅಸೀಸ್ ಎಂಬವರು ಚಿರತೆಯನ್ನು ಕಂಡಿದ್ದಾರೆ. ಅಬ್ದುಲ್ ಖಾದರ್‌ರ ಮನೆ ಹಿತ್ತಿಲ ಮೂಲಕ ಸಾಗಿದ ಚಿರತೆ ಬಳಿಕ ಕಾಡಿಗೆ ತೆರಳಿದೆ. ಅನಂತರ ಚಿಪ್ಲಿಕಯ ಎಂಬಲ್ಲೂ ಚಿರತೆ ಕಂಡಿರುವುದಾಗಿ ಹೇಳಲಾಗುತ್ತಿದೆ. ವಿಷಯ ತಿಳಿದು ಯುವಕರು ವಾಹನಗಳಲ್ಲಿ ತಲುಪಿ ಚಿರತೆ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಮೊನ್ನೆ ರಾತ್ರಿ ಬೋವಿಕ್ಕಾನ ಪೇಟೆಗೆ ತಲುಪಿರುವುದು ದೊಡ್ಡ ಚಿರತೆಯಾಗಿತ್ತು. ಆದರೆ ನಿನ್ನೆ ರಾತ್ರಿ ಕಂಡಿರುವುದು ಸಣ್ಣ ಚಿರತೆಯಾಗಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ.
ಇಂದು ಮುಂಜಾನೆ ಇದೇ ವೇಳ ಕುಟ್ಯಾನಂ ಅರಿಯಲ್ ಎಂಬಲ್ಲಿನ ಮನೆ ಸಮೀಪಕ್ಕೆ ತಲುಪಿದ ಚಿರತೆ ಕೃಷ್ಣನ್ ಎಂಬವರ ಸಾಕುನಾಯಿ ಯನ್ನು ಕಚ್ಚಿಕೊಂಡೊಯ್ದಿದೆ. ಮತ್ತೊಂದು ನಾಯಿ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ ಎಂದು ದೂರಲಾಗಿದೆ. ಇದೇ ವೇಳೆ ಚಿರತೆ ಪದೇ ಪದೇ ಕಾಣಿಸುತ್ತಿರುವುದರಿಂದ ಜನರಲ್ಲಿ ಭಯ ಹುಟ್ಟಿದೆ. ಆದ್ದರಿಂದ ಚಿರತೆಯ ಭೀತಿ ದೂರ ಮಾಡಬೇಕೆಂದು ಒತ್ತಾಯಿಸಿ ಬೋವಿಕ್ಕಾನದಲ್ಲಿ ಚಳವಳಿ ಆರಂಭಿಸಲು ನಾಗರಿಕರು ಆಲೋಚಿಸುತ್ತಿದ್ದಾರೆ. ಚಿರತೆ ಕಾಣಿಸಿಕೊಂಡ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಬೇಕೆಂದು ಒತ್ತಾಯಿಸಿ ಮುಸ್ಲಿಂ ಲೀಗ್ ನೇತಾರ ಕೆ.ಬಿ. ಮುಹಮ್ಮದ್ ಕುಂಞಿ ನೇತೃತ್ವದಲ್ಲಿ ಚಳವಳಿ ನಡೆಸಲಾಗುವುದೆಂದು ತಿಳಿಸಲಾಗಿದೆ.