ಎಲ್ಪಿಜಿ, ಆಧಾರ್ ಕಾರ್ಡ್ ಸೇರಿದಂತೆ ನಾಳೆಯಿಂದ ಬದಲಾಗಲಿದೆ ಹಲವು ಕಾನೂನುಗಳು
ನವದೆಹಲಿ: ನಾಳೆಯಿಂದ ಭಾರತದಲ್ಲಿ ಹಲವು ಪ್ರಮುಖ ಕಾನೂನುಗಳು ಬದಲಾಗಲಿವೆ. ಇದು ಟೆಲಿಕಾಂ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ. ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸುವುದು ಹಾಗೂ ಅವರ ಸುರಕ್ಷತೆಯನ್ನು ಹೆಚ್ಚಿಸುವುದು ಈ ಬದಲಾವಣೆಯ ಪ್ರಧಾನ ಉದ್ದೇಶವಾಗಿದೆ.
ಇದರಂತೆ ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನ ತೈಲ ಮಾರುಕಟ್ಟೆ ಕಂಪೆನಿಗಳು ನಿಗದಿ ಪಡಿಸಲಿವೆ. ಇದರಿಂದಾಗಿ ನಾಳೆಯಿಂದ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ ಅಥವಾ ಇಳಿಕೆ ಕಂಡು ಬರಬಹುದು.
ಇದರ ಹೊರತಾಗಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ಯ ಹೊಸ ನಿಯಮಗಳು ನಾಳೆಯಿಂದ ಜ್ಯಾರಿಗೆ ಬರಲಿದೆ. ಇದರ ಪ್ರಕಾರ ಎಲ್ಲಾ ವಾಣಿಜ್ಯ ಸಂದೇಶಗಳನ್ನು ಪತ್ತೆಹಚ್ಚುವುದು ಕಡ್ಡಾಯವಾಗಿದೆ. ಸ್ಕ್ಯಾಮ್ ಮತ್ತು ವಂಚನೆ ಸಂದೇಶಗಳನ್ನು ಪತ್ತೆಹಚ್ಚಿ ಅದನ್ನು ನಿಯಂತ್ರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ವಿಶೇಷವಾಗಿ ಒಟಿಪಿಯನ್ನು ದುರುಪಯೋಗಪಡಿಸುವುದನ್ನು ತಡೆಗಟ್ಟುವುದೂ ಇದರ ಇನ್ನೊಂದು ಉದ್ದೇಶವಾಗಿದೆ.
ಟೆಲಿ ಮಾರ್ಕೆಟರ್ಗಳು ಅಥವಾ ಕಂಪೆನಿಗಳು ಕಳುಹಿಸುವ ಎಲ್ಲಾ ವಾಣಿಜ್ಯ ಸಂದೇಶಗಳನ್ನು ಪತ್ತೆಹಚ್ಚುವುದನ್ನು ಈ ಹೊಸ ಕಾನೂನು ಖಚಿತಪಡಿಸುತ್ತದೆ. ಸಂದೇಶವನ್ನು ಪತ್ತೆಹಚ್ಚಲಾಗದಿದ್ದರೆ ಅದಕ್ಕೆ ನಿಷೇಧ ಹೇರಲಾಗುತ್ತದೆ. ವಂಚನೆ ಮತ್ತು ಫಿಶಿಂಗ್ ದಾಳಿಯಿಂದ ಗ್ರಾಹಕರನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ನಿಯಮವನ್ನು ಪಾಲಿಸದ ಕಂಪೆನಿ ಅಥವಾ ಟೆಲಿ ಮಾರ್ಕೆಟರ್ಗಳು ಕಠಿಣ ಶಿಕ್ಷೆ ಎದುರಿಸಬೇಕಾಗಿ ಬರಲಿದೆ. ಅಂತಹ ಮೊಬೈಲ್ ಸಂಖ್ಯೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಇದು ಮಾತ್ರವಲ್ಲದೆ ಕ್ರೆಡಿಟ್ ಕಾರ್ಡ್ಗಳಿಗೆ ಸಂಬಂಧಿಸಿದ ಪ್ರಮುಖ ಕ್ರಮಗಳೂ ನಾಳೆಯಿಂದ ಬದಲಾಗಲಿದೆ. ಇದರಂತೆ 50,000 ರೂ.ಗಿಂತ ಹೆಚ್ಚಿನ ಯುಟಿಲಿಟಿ ಬಿಲ್ಗಳಿಗೆ (ವಿದ್ಯುತ್, ನೀರು ಇತ್ಯಾದಿ) ಶೇ. 1ರಷ್ಟು ಶುಲ್ಕ ವಿಧಿಸಲಾಗುವುದು. ಈ ಬದಲಾವಣೆಯನ್ನು ಎಸ್ಬಿಐ ಮತ್ತು ಐಸಿಐಸಿಐ ಕಾರ್ಡ್ಗಳಂತಹ ಪ್ರಮುಖ ಬ್ಯಾಂಕ್ಗಳು ಜ್ಯಾರಿಗೆ ತರಲಿದೆ.
ಇನ್ನೊಂದೆಡೆ ಅಸುರಕ್ಷಿತ ಕ್ರೆಡಿಟ್ ಕಾರ್ಡ್ಗಳ ಮೇಲಿನ ಪರಿಣಾಮ ಶುಲ್ಕ ಈಗ ಶೇ. 3.75 ಆಗಿದ್ದು, ಕಾರ್ಡ್ದಾರರು ಸಕಾಲದಲ್ಲಿ ಹಣ ಪಾವತಿಸದಿದ್ದರೆ, ನಾಳೆಯಿಂದ ಹೆಚ್ಚಿನ ಬಡ್ಡಿ ಪಾವತಿಸಬೇಕಾಗಿ ಬರಲಿದೆ. ಸರ್ಕಾರಿ ವಹಿವಾಟಿನ ಮೇಲೆ ಪ್ರತಿಫಲಗಳು ಇನ್ನು ಲಭ್ಯವಾಗದು. ಇದನ್ನು ಗಮನದಲ್ಲಿ ಇರಿಸಿಕೊಂಡು ಗ್ರಾಹಕರು ತಮ್ಮ ಖರ್ಚುಗಳನ್ನು ಸರಿಯಾಗಿ ನಿರ್ವಹಿಸಬೇಕಾಗಿ ಬರಲಿದೆ.