ಒಂದೇ ಕುಟುಂಬದ ಮೂವರ ಕಗ್ಗೊಲೆ: ಕೊಂದಿದ್ದು ಗೂಂಡಾ ಪಟ್ಟಿಯಲ್ಲಿ ಒಳಗೊಂಡಿರುವ ನೆರೆಮನೆ ನಿವಾಸಿ
ಪರವೂರು: ಪೊಲೀಸರ ಗೂಂಡಾ ಪಟ್ಟಿಯಲ್ಲಿ ಹೆಸರು ಒಳಗೊಂಡಿರುವ ನೆರೆಮನೆಯುವಕ ಒಂದೇ ಕುಟುಂಬದ ಮೂವರನ್ನು ಹೊಡೆದು ಬರ್ಬರವಾಗಿ ಕೊಲೆಗೈದ ಘಟನೆ ಕೊಚ್ಚಿಗೆ ಸಮೀಪದ ಪರವೂರಿನಲ್ಲಿ ನಡೆದಿದೆ.
ಪರವೂರು ಪೆರೆಪ್ಪಡಂ ಕಾಟ್ಟಿ ಪರಂಬಿಲ್ ವೇಣು (69) ಪತ್ನಿ ಉಷ (62), ಮಗಳು ವಿನಿಷ (32) ಎಂಬವರು ಕೊಲೆಗೀಡಾದ ದುರ್ದೈವಿಗಳು. ಕೊಲೆಗೈಯ್ಯಲ್ಪಟ್ಟ ವಿನಿಷಳ ಪತಿ ಜಿತಿನ್ ಬೋಸ್ (35) ಕೂಡಾ ತಲೆಗೆ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈ ಸಾಮೂಹಿಕ ಕೊಲೆಗೈದ ಪ್ರಕರಣದ ಆರೋಪಿ ನೆರೆಮನೆ ನಿವಾಸಿ ಕಣಿಯಾಪರಂಬಿಲ್ ಋತು ಜಯನ್(27) ಬಳಿಕ ಪೊಲೀಸರ ಮುಂದೆ ಶರಣಾಗಿದ್ದಾನೆ.
ನಿನ್ನೆ ಸಂಜೆ ಇಡೀ ಊರನ್ನೇ ನಡುಗಿಸಿದ ಈ ಸಾಮೂಹಿಕ ಕಗ್ಗೊಲೆ ನಡೆದಿದೆ. ಮಾದಕದ್ರವ್ಯ ವ್ಯಸನಿಯಾಗಿರುವ ಆರೋಪಿ ಋತು ಜಯನ್ ಕಳವು ಸೇರಿದಂತೆ ನಾಲ್ಕು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿ ಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲೆಗೈಯ್ಯಲ್ಪಟ್ಟ ವೇಣುರ ಕುಟುಂಬದೊಂದಿಗೆ ಹೊಂದಿರುವ ವೈಮನಸ್ಸೇ ಈ ಕೊಲೆಗೆ ಕಾರಣವೆನ್ನಲಾಗಿದೆ.
ನಿನ್ನೆ ಸಂಜೆ ೬ ಗಂಟೆಗೆ ಕಬ್ಬಿಣದ ಸರಳು ಮತ್ತು ಚಾಕುವಿನೊಂದಿಗೆ ವೇಣುರ ಮನೆಗೆ ಅಕ್ರಮವಾಗಿ ನುಗ್ಗಿ ಬಂದ ಆರೋಪಿ ಋತು, ಕಬ್ಬಿಣದ ಸರಳಿನಿಂದ ವೇಣು, ಅವರ ಪತ್ನಿ ಮತ್ತು ಮಗಳ ತಲೆಗೆ ಸರಳಿನಿಂದ ಯದ್ವಾತದ್ವಾ ಹೊಡೆದು ಅವರನ್ನು ಕೊಲೆಗೈದಿದ್ದಾನೆ. ಅದನ್ನು ತಡೆಯಲು ಬಂದ ಜಿತಿನ್ ಬೋಸ್‌ನ ತಲೆಗೂ ಆರೋಪಿ ಹೊಡೆದು ಗಂಭೀರ ಗಾಯಗೊಳಿಸಿ ದ್ದಾನೆ. ಈ ಕೊಲೆ ನಡೆಯುವ ವೇಳೆ ವಿನಿಷರ ಮಕ್ಕಳಾದ ಅರಾಧಿಕ(11) ಮತ್ತು ಅವ್ನಿ (5) ಕೂಡಾ ಮನೆಯಲ್ಲಿದ್ದರು. ಅವರ ಕಣ್ಣ ಮುಂದೆಯೂ ಆರೋಪಿ ಈ ಮೂವರ ಕಗ್ಗೊಲೆ ನಡೆಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ನಡೆಸಿದ ನಂತರ ನಂತರ ಪೊಲೀಸ್ ಠಾಣೆಗೆ ಬಂದು ಶರಣಾದ ಆರೋಪಿಯ ಬಂಧನವನ್ನು ಬಳಿಕ ಪೊಲೀಸರು ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.