ಕಟ್ಟಿ ಹಾಕಿದ ಕರುವನ್ನು ಅಜ್ಞಾತಪ್ರಾಣಿ ಕೊಂದ ಸ್ಥಿತಿಯಲ್ಲಿ ಪತ್ತೆ: ಕೊಂದಿದ್ದು ಚಿರತೆ ಎಂಬ ಶಂಕೆ

ಬೋವಿಕ್ಕಾನ: ಮುಳಿಯಾರು ಪಂಚಾಯತ್‌ನಲ್ಲಿ ಚಿರತೆ ಕಾಟದ ಭಯ ಇನ್ನೂ ಮುಂದುವ ರಿಯುತ್ತಿರುವಂತೆಯೇ ದನದ ಕರುವೊಂದನ್ನು ಯಾವುದೋ ಪ್ರಾಣಿ ಕೊಂದು ಹಾಕಿದ ಘಟನೆ ನಡೆದಿದೆ. ಮುಳಿಯಾರು ಸೇತುವೆ ಬಳಿಯ ಚಿರಾಂಕೋಡ್‌ನ ಅಬ್ದುಲ್ಲ ಕುಂಞಿ ಎಂಬವರು ಮನೆ ಪಕ್ಕ ಕಟ್ಟಿ ಹಾಕಲಾಗಿದ್ದ ಒಂಬತ್ತು ತಿಂಗಳ ಪ್ರಾಯದ ದನದ ಕರುವನ್ನು ಯಾವುದೋ ಕಾಡು ಜೀವಿ ಕಚ್ಚಿ ಕೊಂದು ಹಾಕಿದ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿದೆ. ಕರುವನ್ನು ಚಿರತೆ ಕೊಂದಿರಬಹುದೆಂಬ ಶಂಕೆಯನ್ನು ಈ ಪ್ರದೇಶದ ಜನರು ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿದ ಕಾಸರಗೋಡು ಅರಣ್ಯ ರೇಂಜ್ ಆಫೀಸರ್ ವಿನೋದ್ ಕುಮಾರ್‌ರ ನೇತೃತ್ವದ ಅರಣ್ಯ ಪಾಲಕರ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಮಾತ್ರವಲ್ಲ ಮುಳಿಯಾರು ಪಶು ಸಂಗೋಪನಾ ಆಸ್ಪತ್ರೆಯ ವೆಟರ್ನರಿ ಸರ್ಜನ್ ಡಾ. ಅತುಲ್ ಗಣೇಶ್‌ರವರು ಸ್ಥಳಕ್ಕೆ ಆಗಮಿಸಿ ಕರುವಿನ ಕಳೇಬರವನ್ನು ಪರಿಶೀಲಿಸಿದರು. ಆದರೆ ಚಿರತೆ ಕಡಿದು ಕೊಂದ ಯಾವುದೇ ಲಕ್ಷಣಗಳು ಇಲ್ಲಿ ಕಂಡು ಬಂದಿಲ್ಲ. ಆದ್ದರಿಂದ ಬೀದಿ ನಾಯಿಗಳ ಗುಂಪು ಕರುವನ್ನು ಕಚ್ಚಿ ಕೊಂದಿರಬಹುದೆಂಬ ಶಂಕೆಯನ್ನು ಅರಣ್ಯ ಇಲಾಖೆಯವರು ವ್ಯಕ್ತಪಡಿಸಿದ್ದಾರೆ.

ಮುಳಿಯಾರು ಗ್ರಾಮ ಪಂಚಾಯತ್‌ಗೊಳಪಟ್ಟ ಹಲವೆಡೆಗಳಲ್ಲಿ ಚಿರತೆಯನ್ನು ಕಂಡಿರುವುದಾಗಿ ಈ ಹಿಂದೆ ಹಲವು ಮಂದಿ ತಿಳಿಸಿದ್ದಾರೆ. ಆದರೆ ಅದನ್ನು ಅರಣ್ಯ ಪಾಲಕರು ಇನ್ನೂ ದೃಢೀಕರಿಸಿಲ್ಲ. ಆದರೂ ಈ ಪ್ರದೇಶದ ಜನರಲ್ಲಿ ಚಿರತೆ ಭಯ ಇನ್ನೂ ಕಾಡುತ್ತಿದೆ.

Leave a Reply

Your email address will not be published. Required fields are marked *

You cannot copy content of this page