ಕಣ್ಣೂರು ವಿ.ವಿ. ಯೂನಿಯನ್ ಕಲೋತ್ಸವ: ಕಾಸರಗೋಡು ಸರಕಾರಿ ಕಾಲೇಜು ಮುನ್ನಡೆ
ಹೊಸದುರ್ಗ: ಮುನ್ನಾಡ್ ಪೀಪಲ್ಸ್ ಕಾಲೇಜಿನಲ್ಲಿ ಮೊನ್ನೆ ಆರಂಭಗೊಂಡಿರುವ ಕಣ್ಣೂರು ವಿಶ್ವವಿದ್ಯಾಲಯದ ಯೂನಿಯನ್ ಕಲೋತ್ಸವ ಆವೇಶಭರಿತವಾಗಿ ಮುಂದುವರಿಯುತ್ತಿದೆ. ಸ್ಪರ್ಧಾಳುಗಳ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.
ಈ ತನಕ ಪ್ರಕಟಗೊಂಡ ಫಲಿತಾಂಶ ಪ್ರಕಾರ ವೇದಿಕೇತರ ಸ್ಪರ್ಧೆಗಳಲ್ಲಿ ೯೩ ಅಂಕಗಳೊಂದಿಗೆ ಕಾಸರಗೋಡು ಸರಕಾರಿ ಕಾಲೇಜು ಮುನ್ನಡೆಯಲ್ಲಿದೆ. ತಲಶ್ಶೇರಿ ಸರಕಾರಿ ಬ್ರೆನ್ನನ್ ಕಾಲೇಜು ೮೦ ಮತ್ತು ತಳಿಪರಂಬ ಕೆಯಿ ಸಾಹೀಬ್ ಬಿಎಡ್ ಸೆಂಟರ್- ೬೮ ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳಲ್ಲಿ ಮುಂದುವರಿಯುತ್ತಿದೆ. ಪಯ್ಯನ್ನೂರು ಕಾಲೇಜು- ೫೦, ಕಣ್ಣೂರು ಎಸ್.ಎನ್ ಕಾಲೇಜು ೫೦, ತಳಿಪರಂಬ ಸಯ್ಯಿದ್ ಕಾಲೇಜು ೪೬, ಮಾಂಙಾಟ್ ಪರಂಬ ಕ್ಯಾಂಪಸ್-೪೪ ಮತ್ತು ಬ್ರೆನ್ನನ್ ಬಿಎಡ್ ಸೆಂಟರ್ ತಲಶ್ಶೇರಿ- ೪೨ ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದೆ.
ವೇದಿಕೆ ಸ್ಪರ್ಧೆಗಳು ಇಂದು ಬೆಳಿಗ್ಗೆ ಆರಂಭಗೊಂಡಿತು. ಇದರಂತೆ ಆರಂಭದಲ್ಲಿ ನೃತ್ಯ ಸ್ಪರ್ಧೆಗಳು ನಡೆಯುತ್ತಿದೆ. ಇಂದು ಸಂಜೆ ೫ ಗಂಟೆಗೆ ನಡೆಯುವ ಸಮಾರಂಭದಲ್ಲಿ ರಾಜ್ಯ ವಿಧಾನಸಾ ಅಧ್ಯಕ್ಷ ಎ.ಎನ್. ಶಂಶೀರ್ ಕಲೋತ್ಸವವನ್ನು ವಿದ್ಯುಕ್ತವಾಗಿ ಉದ್ಘಾಟಿಸುವರು. ನಟ ಉಣ್ಣಿರಾಜ್ ಚೆರುವತ್ತೂರು, ನಟಿ ಚಿತ್ರಾ ನಾಯರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರವಿವಾರದಂದು ಈ ಕಲೋತ್ಸವ ಸಮಾಪ್ತಿಗೊಳ್ಳಲಿದ್ದು, ಅದನ್ನು ರಾಜ್ಯ ಉನ್ನತ ಶಿಕ್ಷಣ ಖಾತೆ ಸಚಿವ ಡಾ. ಆರ್. ಬಿಂದು ಉದ್ಘಾಟಿಸುವರು.
ಆಂಡ್ ಸಯನ್ಸ್ ಮುನ್ನಾಡ್ ಪೀಪಲ್ ಆರ್ಟ್ಸ್ ಕಾಲೇಜಿನ ಹೊರತಾಗಿ ಅಲ್ಲೇ ಪರಿಸರದ ಸರಕಾರಿ ಹೈಸ್ಕೂಲು ಮತ್ತು ಮುನ್ನಾಡ್ ಪೇಟೆ ಎಂಬೆಡೆಗಳಲ್ಲಿ ನಿರ್ಮಿಸಲಾದ ಒಟ್ಟು ೧೧ ವೇದಿಕೆಗಳಲ್ಲಾಗಿ ಸ್ಪರ್ಧೆಗಳು ನಡೆಯುತ್ತಿವೆ.