ಅಬ್ಬರದ ಬಹಿರಂಗ ಚುನಾವಣಾ ಪ್ರಚಾರಕ್ಕೆ ಇಂದು ಸಂಜೆ ತೆರೆ

ಕಾಸರಗೋಡು: ಕೇರಳ ಸೇರಿದಂತೆ ಒಟ್ಟು 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಎಪ್ರಿಲ್ 26ರಂದು ನಡೆಯಲಿರುವ ಎರಡನೇ ಹಂತದ ಲೋಕಸಭಾ ಚುನಾವಣೆಯ ಅಬ್ಬರದ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 6 ಗಂಟೆಗೆ ತೆರೆಬೀಳಲಿದೆ. ಆ ಬಳಿಕದ 48 ತಾಸುಗಳ ತನಕ ಮತದಾರರ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವ ಯತ್ನಗಳಿಗೆ ಚನಾವಣಾ ಆಯೋಗ ನಿಷೇಧ ಹೇರಿದೆ.

ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಗೆಲುವಿಗಾಗಿ ಅಂತಿಮ ಹಂತದ ಪ್ರಚಾರದಲ್ಲಿ ನಿರತವಾಗಿವೆ. ರಾಜ್ಯದ ಎಲ್ಲಾ 20 ಲೋಕಸಭಾ ಕ್ಷೇತ್ರಗಳಲ್ಲೂ ಇಂದು ಸಂಜೆ ಅಬ್ಬರದ ಪ್ರಚಾರಕ್ಕೆ ತೆರೆಬೀಳಲಿದ್ದು, ಇದರಂಗವಾಗಿ ವಿವಿಧ ಒಕ್ಕೂಟಗಳ ರೋಡ್ ಶೋ  ಇಂದು ಬೆಳಿಗ್ಗೆ ಆರಂಭಗೊಂಡಿವೆ.  

ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿಯವರ ರೋಡ್ ಶೋ ಇಂದು ಬೆಳಿಗ್ಗೆ ತೂಮಿನಾಡಿನಿಂದ ಆರಂಭಗೊಂಡಿತು. ರೋಡ್ ಶೋ ಬಳಿಕ  ಉಪ್ಪಳ, ಕುಂಬಳೆ, ಸೀತಾಂಗೋಳಿ, ಉಳಿಯತ್ತಡ್ಕ, 2.30ಕ್ಕೆ ಕಾಸರಗೋಡಿನ ಕರಂದಕ್ಕಾಡಿಗೆ ತಲುಪಿ ಪಳ್ಳದ ಮೂಲಕ ಕಾಸರಗೋಡು ಕಡಪ್ಪುರ ತನಕ ಸಾಗಲಿದೆ.

ಸಂಜೆ 4 ಗಂಟೆಗೆ ನೆಲ್ಲಿಕುಂಜೆ ಬೀಚ್‌ನಿಂದ ಆರಂಭಗೊಂಡು ನಗರದ ಏರ್‌ಲೈನ್ಸ್  ಜಂಕ್ಷನ್ ಮತ್ತು ಪ್ರಧಾನ ಅಂಚೆ ಕಚೇರಿ ಮೂಲಕ  ಸಾಗಿ ಪ್ರೆಸ್ ಕ್ಲಬ್ ಜಂಕ್ಷನ್ ಬಳಿ ಸಮಾಪ್ತಿಹೊಂ ದಲಿದೆ.

ಮಂಜೇಶ್ವರ ಮಂಡಲದ ಅಂತಿಮ ಪ್ರಚಾರಸಭೆ ಇಂದು ಮಧ್ಯಾಹ ಕುಂಬಳೆಯಲ್ಲಿ ನಡೆಯಲಿದೆ. 2 ಗಂಟೆಗೆ ಶೋಭಾ ಯಾತ್ರೆ ವಾದ್ಯಘೋಷ ಗಳೊಂದಿಗೆ  ಕುಂಬಳೆ ಪಕ್ಷದ ಕಚೇರಿ ಸಮೀಪ ದಿಂದ ಹೊರಟು ಕಣಿಪುರ ದೇವಸ್ಥಾನದ ಮಹಾದ್ವಾರದ ಮೂಲಕ ಕುಂಬಳೆ ಪೇಟೆಗೆ ಸಂಜೆ 5 ಗಂಟೆಗೆ ತಲುಪಲಿದೆ.  ಎಲ್ಲಾ ಪಂಚಾಯತ್‌ನ ಜನಪ್ರತಿನಿಧಿ ಗಳು,ಪಕ್ಷದ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಬೇಕೆಂದು ಪದಾಧಿಕಾರಿಗಳು ವಿನಂತಿಸಿದ್ದಾರೆ.

ಎಲ್‌ಡಿಎಫ್ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ಮಾಸ್ತರ್‌ರ ವಾಹನ ಪ್ರಚಾರ ಜಾಥಾ ಹೊಸಂಗಡಿ ಎಕೆಜಿ ಮಂದಿರದಿಂದ ಇಂದು ಬೆಳಿಗ್ಗೆ ಆರಂಭಗೊಂಡಿತು. ಶಾಸಕ ಸಿ.ಎಚ್.ಕುಂಞಂಬು ಉದ್ಘಾಟಿಸಿದರು. ಬಳಿಕ ಉಪ್ಪಳ, ಕುಂಬಳೆ ಮೂಲಕ ಸಾಗಿ ಸಂಜೆ 5ಕ್ಕೆ ಪಯ್ಯನ್ನೂರಿನಲ್ಲಿ ಸಮಾಪ್ತಿಗೊಳ್ಳಲಿದೆ.ಯುಡಿಎಫ್ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್‌ರ ಚುನಾವಣೆ ಪ್ರಚಾರದ ಸಮಾರೋಪ ಇಂದು ಸಂಜೆ ೩ಕ್ಕೆ ಕಳನಾಡಿನಿಂದ ಜಾಥಾ ವಾಗಿ ಹೊರಟು  ಕಾಸರ ಗೋಡು ಹಳೆ ಬಸ್ ನಿಲ್ದಾಣಕ್ಕೆ ತಲುಪಲಿದೆ. ಬಳಿಕ ಅಬ್ಬರದ ಪ್ರಚಾರ ಕೊನೆಗೊಳ್ಳುವುದು.

Leave a Reply

Your email address will not be published. Required fields are marked *

You cannot copy content of this page