ಕಣ್ವತೀರ್ಥದಲ್ಲಿ ತೆಂಗಿನ ಮರ, ರಸ್ತೆ ನೀರುಪಾಲು: ಇನ್ನು ಮನೆಗಳಿಗೆ ಭೀತಿ
ಮಂಜೇಶ್ವರ: ಪಂಚಾಯತ್ನ ಒಂದನೇ ವಾರ್ಡ್ ವ್ಯಾಪ್ತಿಯ ಕಣ್ವತೀರ್ಥದಲ್ಲಿ ಕಡಲ್ಕೊರೆತಕ್ಕೆ ಹಲವಾರು ಮನೆಗಳು ನೀರುಪಾಲಾಗುವ ಭೀತಿ ಎದುರಾಗಿದೆ. ಈಗಾಗಲೇ ಇಲ್ಲಿ ಹಲವಾರು ತೆಂಗಿನ ಮರಗಳು ಸಮುದ್ರಪಾಲಾಗಿವೆ. ರಸ್ತೆ ಕೂಡಾ ನೀರಿಗೆ ಕೊಚ್ಚಿ ಹೋಗಿ ಕೆಲವು ಮನೆಯ ಅಂಗಳದವರೆಗೆ ಸಮುದ್ರದ ನೀರು ತಲುಪುತ್ತಿದೆ.
ಪ್ರತಿ ವರ್ಷ ಕಣ್ವತೀರ್ಥದಲ್ಲಿ ಕಡಲ್ಕೊರೆತ ಉಂಟಾಗುತ್ತಿದ್ದು, ಇಲ್ಲಿ ತಡೆಗೋಡೆ ನಿರ್ಮಿಸಬೇಕೆಂಬ ಸ್ಥಳೀಯ ನಿವಾಸಿಗಳ ಬೇಡಿಕೆ ಇನ್ನು ಫಲ ಪ್ರಾಪ್ತಿಗೆ ತಲುಪಿಲ್ಲ. ಅಧಿಕಾರಿಗಳು ಬಂದು ನೋಡಿ ಭರವಸೆ ನೀಡುತ್ತಿದ್ದಾರಲ್ಲದೆ ತಡೆಗೋಡೆ ನಿರ್ಮಾಣಕ್ಕೆ ಅಗತ್ಯ ಕ್ರಮ ಇದುವರೆಗೂ ಉಂಟಾಗಿಲ್ಲವೆಂದು ಸ್ಥಳೀಯರು ದೂರುತ್ತಾರೆ. ಕಡಲ್ಕೊರೆತ ಹೀಗೇ ಮುಂದುವರಿದಲ್ಲಿ ಇಲ್ಲಿನ ಹಲವು ಮನೆ ಮಂದಿ ಕಂಗೆಡುವುದು ಖಚಿತವೆಂದು ಸ್ಥಳೀಯರು ತಿಳಿಸುತ್ತಾರೆ. ಕಳೆದ ವರ್ಷ ಶಾಸಕರ ಸಹಿತ ಅಧಿಕಾರಿಗಳ ತಂಡ ಇಲ್ಲಿಗೆ ಭೇಟಿ ನೀಡಿತ್ತು. ಈ ಬಾರಿಯೂ ವಾರ್ಡ್ ಪ್ರತಿನಿಧಿ ವಿನಯ ಭಾಸ್ಕರ್, ಪಂ. ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ, ಕುಂಜತ್ತೂರು ವಿಲ್ಲೇಜ್ ಆಫೀಸರ್ ಸ್ಥಳ ಸಂದರ್ಶಿಸಿದ್ದಾರೆ. ತಡೆಗೋಡೆ ಕೂಡಲೇ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.