ಕನಿಲ ಕ್ಷೇತ್ರ ಬಳಿ ಚಿರತೆ ಪತ್ತೆ ವದಂತಿ : ವಿವಿಧೆಡೆ ಶೋಧ; ನಾಗರಿಕರಲ್ಲಿ ಆಶ್ಚರ್ಯ, ಆತಂಕ
ಉಪ್ಪಳ: ಕನಿಲದಲ್ಲಿ ಚಿರತೆಯೊಂ ದು ಕಾಣಿಸಿಕೊಂಡ ಬಗ್ಗೆ ವದಂತಿಯಾಗುವುದರೊಂದಿಗೆ ಸ್ಥಳೀಯರಲ್ಲಿ ಆಶ್ಚರ್ಯದ ಜೊತೆಗೆ ಆತಂಕವೂ ಮೂಡಿಸಿದೆ. ಕನಿಲದಲ್ಲಿ ನವೀಕರಣಗೊಳ್ಳುತ್ತಿರುವ ಶ್ರೀ ಭಗವತೀ ಕ್ಷೇತ್ರ ಸಮೀಪ ಮೂರು ದಿನಗಳ ಹಿಂದೆ ಚಿರತೆಯೊಂದು ಕಾಣಿಸಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಸಂಜೆ 7 ಗಂಟೆ ವೇಳೆ ಆಟೋ ರಿಕ್ಷಾವೊಂದು ಆ ಭಾಗಕ್ಕೆ ಬಾಡಿಗೆಗೆ ತೆರಳಿದ ಸಂದರ್ಭದಲ್ಲಿ ಚಿರತೆಯನ್ನು ಹೋಲುವ ಪ್ರಾಣಿಯೊಂದು ಕ್ಷೇತ್ರ ಸಮೀಪ ಕಂಡುಬಂದಿ ರುವುದಾಗಿ ಚಾಲಕ ತಿಳಿಸಿದ್ದನು. ಆ ಕೂಡಲೇ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿ ವಿವಿಧೆಡೆ ಹುಡುಕಾಟ ನಡೆಸಿದ್ದರು. ಈ ವೇಳೆ ಚಿರತೆಯದ್ದೆಂದು ಅಂದಾಜಿಸಲಾದ ಹೆಜ್ಜೆ ಗರುತು ಕ್ಷೇತ್ರ ಸಮೀಪ ಪತ್ತೆಯಾಗಿದೆ. ಆದರೆ ಹುಡುಕಾಟ ನಡೆಸಿದ ವೇಳೆ ಯಾವುದೇ ಪ್ರಾಣಿ ಕಾಣಿಸದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಇರಿಯಣ್ಣಿಯಲ್ಲಿ ಮತ್ತೆ ಚಿರತೆ ಕಾಟ: ಬೋವಿಕ್ಕಾನ: ಇಲ್ಲಿಗೆ ಸಮೀಪದ ಇರಿಯಣ್ಣಿ ಬೇಪು ಎಂಬಲ್ಲಿ ಚಿರತೆ ಉಪಟಳ ತೀವ್ರಗೊಂಡಿದೆ. ಬೇಪುವಿನ ಉದಯನ್ ಎಂಬವರ ಮನೆ ಪರಿಸರದಲ್ಲಿ ಇಂದು ಮುಂಜಾನೆ ಚಿರತೆಯೊಂದು ಕಂಡುಬಂದಿದೆ. ಅಲ್ಲದೆ ಉದಯನ್‌ರ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದ ಬಗ್ಗೆ ತಿಳಿಸಲಾಗಿದೆ. ಮುಂಜಾನೆ ವೇಳೆ ನಾಯಿ ಬೊಗಳುವುದನ್ನು ಕೇಳಿ ಉದಯನ್ ಬೆಳಕು ಹಾಯಿಸಿದಾಗ ನಾಯಿಯನ್ನು ಚಿರತೆ ಕಚ್ಚಿ ಕೊಂಡೊಯ್ಯುತ್ತಿರುವುದು ಕಂಡುಬಂದಿದೆ. ಈ ಮನೆಯಲ್ಲಿ ಎರಡು ನಾಯಿಗಳಿದ್ದು, ಗೂಡಿನಲ್ಲಿದ್ದ ನಾಯಿ ಅಪಾಯದಿಂದ ಪಾರಾಗಿದೆ.