ಕನ್ನಡಿಗರಿಗಾಗಿ ಕನ್ನಡ ಕಲಿಯಲು ಮುಂದಾದ ಜನಪ್ರತಿನಿಧಿಗಳು, ನೌಕರರು
ಮುಳಿಯಾರು: ಅಚ್ಚಕನ್ನಡ ಪ್ರದೇಶಗಳಲ್ಲಿ ಇತರ ಭಾಷೆಯ ಪಾರಮ್ಯವಾದಾಗ ಕನ್ನಡಿಗರಿಗೆ ಸಮಸ್ಯೆ ಕೇಳುವವರಿಲ್ಲದಂತಾಗಿದೆ. ಸರಕಾರಿ ಕಚೇರಿಗಳಲ್ಲಿ ಮಲಯಾಳ ಭಾಷೆಯ ನೌಕರರು ಇರುವ ಕಾರಣ ಮಲಯಾಳ ತಿಳಿಯದ ಗ್ರಾಮೀಣ ಭಾಗದ ಕನ್ನಡಿಗರಿಗೆ ತೀರಾ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಯನ್ನು ಮನಗಂಡ ಮುಳಿಯಾರು ಪಂಚಾಯತ್‌ನ ಜನಪ್ರತಿನಿಧಿಗಳು, ಉದ್ಯೋಗಿಗಳು ಕನ್ನಡ ಕಲಿಯಲು ಮುಂದಾಗುತ್ತಿದ್ದಾರೆ. ಪಂಚಾಯತ್‌ನ ಮೂರು, ನಾಲ್ಕನೇ ವಾರ್ಡ್‌ಗಳಲ್ಲಿ ಕನ್ನಡಿಗರೇ ಇದ್ದು, ಇವರೊಂದಿಗೆ ಪಂಚಾಯತ್ ಅಧಿಕಾರಿಗಳಿಗೆ ಸಂವಹನ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರಿ ಸೇವೆ ಕನ್ನಡಿಗರಿಗೂ ಸುಲಭದಲ್ಲಿ ಲಭ್ಯಗೊಳಿಸುವ ಉದ್ದೇಶವಿರಿಸಿ ಕನ್ನಡ ಕಲಿಯಲು ಪಂಚಾಯತ್ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಸಾಕ್ಷರತಾ ಮಿಶನ್‌ನ ಕನ್ನಡ ಸಾಕ್ಷರತಾ ಪಾಠ ಪುಸ್ತಕ ಉಪಯೋಗಿಸಿ ಕನ್ನಡ ಕಲಿಯಲಾಗದು. ಅಧ್ಯಾಪಿಕೆಯಾಗಿ ಸಂಧ್ಯಾರನ್ನು ತೀರ್ಮಾನಿಸಲಾಗಿದೆ. ಮಧ್ಯಾಹ್ನದ ಊಟದ ವಿರಾಮ ವೇಳೆ ತರಗತಿ ನಡೆಯಲಿದೆ. ಆರು ತಿಂಗಳು ಕಾಲಾವಧಿ ತೀರ್ಮಾನಿಸಲಾಗಿದೆ. ಈ ಕಲಿಕೆಗೆ ಬೇಕಾಗಿಬರುವ ಪೂರ್ಣ ವೆಚ್ಚವನ್ನು ಪಂಚಾಯತ್ ವಹಿಸಲಿದೆ. ಕನ್ನಡ ಭಾಷೆಯವರೊಂದಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ವೆಂದೂ,
ಆ ಸಮಸ್ಯೆ ನಿವಾರಣೆಗಾಗಿ ಈ ಕಲಿಕೆ ಆರಂಭಿಸಲಾಗಿದೆ ಎಂದೂ ಪಂ. ಅಧ್ಯಕ್ಷೆ ಪಿ.ವಿ. ಮಿನಿ ತಿಳಿಸಿದ್ದಾರೆ. ಇದೊಂದು ಮಾದರಿ ಕಾರ್ಯವಾಗಿದ್ದು, ಇತರ ಕನ್ನಡ ತಿಳಿಯದವರೂ ಭಾಷಾ ಜ್ಞಾನ ಪಡೆದರೆ ಕನ್ನಡಿಗರ ಸಮಸ್ಯೆಗೆ ಅಲ್ಪ ಪರಿಹಾರವಾಗಬಹುದೆಂದೂ ಕನ್ನಡಿಗರು ಅಭಿಪ್ರಾಯಪಟ್ಟಿದ್ದಾರೆ.