ಕಲ್ಯೋಟ್ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಅವಳಿ ಕೊಲೆ ಪ್ರಕರಣದ ತೀರ್ಪು ಡಿ. 13ರಂದು
ಕಾಸರಗೋಡು: ಇಡೀ ಕೇರಳವನ್ನೇ ನಡುಗಿಸಿದ್ದ ಪೆರಿಯಾಕ್ಕೆ ಸಮೀಪದ ಕಲ್ಯೋಟ್‌ನ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಶರತ್‌ಲಾಲ್ ಮತ್ತು ಕೃಪೇಶ್ ಸಂಚರಿಸುತ್ತಿದ್ದ ಬೈಕನ್ನು ತಡೆದು ನಿಲ್ಲಿಸಿ ಯದ್ವಾತದ್ವವಾಗಿ ಕಡಿದು ಅವರಿಬ್ಬರನ್ನೂ ಬರ್ಬರವಾಗಿ ಕೊಲೆಗೈದ ಪ್ರಕರಣದ ವಿಚಾರಣೆ ಎರ್ನಾಕುಳಂನ ಸಿಬಿಐ ನ್ಯಾಯಾಲಯದಲ್ಲಿ ಪೂರ್ಣಗೊಂಡಿದ್ದು, ಅದರ ಘೋಷಣೆಯನ್ನು ನ್ಯಾಯಾಲಯ ಡಿ. 13ಕ್ಕೆ ಮೀಸಲಿರಿಸಿದೆ. ತೀರ್ಪನ್ನು ಇಡೀ ಕೇರಳವೇ ಅತೀವ ಕಾತರದಿಂದ ಎದುರು ನೋಡುತ್ತಿದೆ. ಕೊಲೆ ಪ್ರಕರಣದಲ್ಲಿ ಒಟ್ಟು 24 ಆರೋಪಿಗಳು ಒಳಗೊಂಡಿದ್ದು, ಅದರಲ್ಲಿ ೧೬ ಮಂದಿ ಜಮೀನು ಲಭಿಸದೆ ಈಗಲೂ ಜೈಲಿನಲ್ಲೇ ಕಳೆಯುತ್ತಿದ್ದಾರೆ. ಉಳಿದವರಿಗೆ ಈ ಹಿಂದೆ ಜಾಮೀನು ಲಭಿಸಿತ್ತು. ಆರೋಪಿಗಳೆಲ್ಲಾ ಸಿಪಿಎಂ ಕಾರ್ಯಕರ್ತರಾಗಿದ್ದಾರೆ. ಕಲ್ಯೋಟ್‌ನ ಸಿಪಿಎಂ ನೇತಾರ ಪೀತಾಂಭರನ್ ಈ ಕೊಲೆ ಪ್ರಕರಣದ ಒಂದನೇ ಆರೋಪಿಯಾಗಿದ್ದಾನೆ. ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ವಿ. ಕುಂಞಿರಾಮನ್ ಕೂಡಾ ಈ ಪ್ರಕರಣದಲ್ಲಿ ಆರೋಪಿಗಳಲ್ಲೋರ್ವರಾಗಿದ್ದಾರೆ. ೨೦೧೯ ಫೆಬ್ರವರಿ ೧೭ರಂದು ರಾತ್ರಿ ಕಲ್ಯೋಟ್‌ನಲ್ಲಿ ಶರತ್‌ಲಾಲ್, ಕೃಪೇಶ್‌ರನ್ನು ಕೊಲೆಗೈಯ್ಯಲಾಗಿತ್ತು. ಆರಂಭದಲ್ಲಿ ಬೇಕಲ ಪೊಲೀಸರು ಈ ಕೊಲೆ ಪ್ರಕರಣದ ತನಿಖೆ ನಡೆಸಿದ್ದರು. ನಂತರ ತನಿಖೆಯನ್ನು ಕ್ರೈಮ್ ಬ್ರಾಂಚ್‌ಗೆ ಹಸ್ತಾಂತರಿಸಲಾಗಿತ್ತು. ತನಿಖೆ ಸರಿಯಾಗಿ ನಡೆಯುತ್ತಿಲ್ಲವೆಂದು ದೂರಿ ಕೊಲೆಗೈಯ್ಯಲ್ಪಟ್ಟ ಯೂತ್ ಕಾಂಗ್ರೆಸ್ ಕಾರ್ಯ ಕರ್ತರ ಹೆತ್ತವರು ನಂತರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ನ್ಯಾಯಾಲಯ ಈ ಕೊಲೆ ಪ್ರಕರಣದ ತನಿಖೆಯನ್ನು ನಂತರ ಸಿಬಿಐಗೆ ಹಸ್ತಾಂತರಿಸಿತ್ತು.