ಕಳವುಗೈದ ಅಡಿಕೆ ಬೈಕ್‌ನಲ್ಲಿ ಸಾಗಾಟ : ಪೊಲೀಸರನ್ನು ಕಂಡು ಸವಾರ ಓಡಿ ಪರಾರಿ
ಉಪ್ಪಳ: ಬೈಕ್‌ನಲ್ಲಿ ಅಡಿಕೆ ಸಾಗಿಸುತ್ತಿದ್ದ ವ್ಯಕ್ತಿ ಪೊಲೀಸರನ್ನು ಕಂಡೊಡನೆ ಬೈಕ್ ಹಾಗೂ ಅಡಿಕೆಯನ್ನು ಉಪೇಕ್ಷಿಸಿ ಪರಾರಿ ಯಾದ ಘಟನೆ ನಡೆದಿದೆ. ಇಂದು ಮುಂಜಾನೆ ೨ಗಂಟೆ ವೇಳೆ ವರ್ಕಾಡಿ ಬಳಿಯ ಪುರುಷಂಗೋಡಿಯಲ್ಲಿ ಈ ಘಟನೆ ನಡೆದಿದ್ದು, ಓಡಿ ಪರಾರಿಯಾದ ವ್ಯಕ್ತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕಳವು ಪ್ರಕರಣ ತೀವ್ರಗೊಂಡ ಹಿನ್ನೆಲೆಯಲ್ಲಿ ಮಂಜೇಶ್ವರ ಠಾಣೆ ಎಎಸ್‌ಐ ಅತುಲ್‌ರಾಮ್ ನೇತೃತ್ವದ ಪೊಲೀಸರು ಇಂದು ಮುಂಜಾನೆ ಕೇರಳ-ಕರ್ನಾಟಕದ ಗಡಿ ಪ್ರದೇಶವಾದ ಪುರುಷಂಗೋಡಿನಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಕರ್ನಾಟಕ ಭಾಗದಿಂದ ಬರುತ್ತಿದ್ದ ಬೈಕ್ ಸವಾರ ಪೊಲೀಸರನ್ನು ಕಾಣುತ್ತಲೇ ಬೈಕ್ ಉಪೇಕ್ಷಿಸಿ ಪರಾರಿಯಾಗಿದ್ದಾನೆ. ಕೂಡಲೇ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದರೂ ಪತ್ತೆಹಚ್ಚಲಾಗಲಿಲ್ಲ. ಬೈಕ್‌ನಲ್ಲಿ ಸುಲಿದ ೩೦ ಕಿಲೋದಷ್ಟು ಅಡಿಕೆಯನ್ನು ಗೋಣಿ ಚೀಲದಲ್ಲಿ ತುಂಬಿಸಿಡಲಾಗಿತ್ತು. ಕಳವುಗೈಯ್ದ ಅಡಿಕೆಯನ್ನು ಇತ್ತ ಸಾಗಿಸುತ್ತಿದ್ದಿರಬಹುದೆಂದು ಅಂದಾಜಿಸಲಾಗಿದೆ. ಕರ್ನಾಟಕ ನೋಂದಾವಣೆಯ ಬೈಕ್ ಹಾಗೂ ಅಡಿಕೆಯನ್ನು ಪೊಲೀಸರು ವಶಕ್ಕೆ ತೆಗೆದು ತನಿಖೆ ತೀವ್ರಗೊಳಿಸಿದ್ದಾರೆ.