ಕಳ್ಳನೋಟು ಪ್ರಕರಣ: ಜಾಮೀನಿನಲ್ಲಿ ಹೊರ ಬಂದ ಯುವಕ ಪತ್ನಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ
ಕಣ್ಣೂರು: ಕಳ್ಳನೋಟು ಪ್ರಕರಣದಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದ ಯುವಕ ಪತ್ನಿಯ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಚೊರುಕಳ ನಿವಾಸಿ ವಿ.ಕೆ. ಉಬೈಸ್ (45)ನನ್ನು ಕೋಳ್ಮೊಟ್ಟದಲ್ಲಿರುವ ಪತ್ನಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಿನ್ನೆ ಬೆಳಿಗ್ಗೆ ಪತ್ತೆಹಚ್ಚಲಾಗಿದೆ. 2009 ಜುಲೈ 26ರಂದು ಉಬೈಸ್‌ನನ್ನು ಕಣ್ಣೂರು ನಗರ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಪಿ. ಸದಾನಂದ ಹಾಗೂ ತಂಡ ಸೆರೆ ಹಿಡಿದಿತ್ತು. ಮೊಬೈಲ್ ಶಾಪ್‌ನಿಂದ ಫೋನ್ ಕರೀದಿಸಿ ಈತ ಕಳ್ಳನೋಟು ನೀಡಿದ್ದನೆನ್ನಲಾಗಿದೆ. ಸಂಶಯದಲ್ಲಿ ಅಂಗಡಿ ನೌಕರ ಈತನನ್ನು ತಡೆದಿಟ್ಟು ಪೊಲೀಸರಿಗೆ ಹಸ್ತಾಂತರಿಸಿದ್ದನು. ಬಳಿಕ ವಿಚಾರಣೆ ನಡೆಸಲಾಗಿದೆ. ಈ ಮಧ್ಯೆ ಉಬೈಸ್‌ನ ಹೆಸರಲ್ಲಿರುವ ಬಾಡಿಗೆ ಕೊಠಡಿಯೊಂದರಲ್ಲಿ 100 ರೂ.ಗಳ 50 ಕಳ್ಳನೋಟುಗಳನ್ನು ಪತ್ತೆಹಚ್ಚಲಾಗಿದೆ. ಸಿರಾಜ್ ಎಂಬಾತ ತನಗೆ ಇದನ್ನು ನೀಡಿರುವುದಾಗಿ ಉಬೈಸ್ ಪೊಲೀಸರಿಗೆ ಹೇಳಿಕೆ ನೀಡಿದ್ದನು. 15 ವರ್ಷದ ಬಳಿಕ ಕಳೆದ ವರ್ಷದ ನವೆಂಬರ್‌ನಲ್ಲಿ ನ್ಯಾಯಾಲಯ ಈ ಪ್ರಕರಣದಲ್ಲಿ ತೀರ್ಪು ನೀಡಿತ್ತು. ಅಪೀಲು ನೀಡಲು ಶಿಕ್ಷೆಗೆ ಸ್ಟೇ ಪಡೆದು ಹೊರ ಬಂದಿದ್ದ ಉಬೈಸ್ ಬಳಿಕ ಆತ್ಮಹತ್ಯೆ ಗೈದಿದ್ದಾನೆ. ಮೃತ ಯುವಕ ತಾಯಿ ಆಯಿಷ, ಪತ್ನಿ ಸಫಿಯ, ಪುತ್ರ ಅಸ್ಮಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.