ಕಾಂಗ್ರೆಸ್‌ನ ‘ಸಮರಾಗ್ನಿ’ ಆಂದೋಲನಕ್ಕೆ ಚಾಲನೆ: ಮುಖ್ಯಮಂತ್ರಿ ನೇತೃತ್ವದಲ್ಲಿ ದಿಲ್ಲಿಯಲ್ಲಿ ನಡೆಸಿದ್ದು

ರಾಜಕೀಯ ನಾಟಕ- ಕೆ.ಸಿ. ವೇಣುಗೋಪಾಲ್

ಕಾಸರಗೋಡು: ಕಾಂಗ್ರೆಸ್‌ನ ಕೇರಳ ಘಟಕದ ಅಧ್ಯಕ್ಷ ಕೆ. ಸುಧಾಕರನ್ ಮತ್ತು ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್ ಅವರ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಸಮರಾಗ್ನಿ ಆಂದೋಲನಕ್ಕೆ ನಿನ್ನೆ ಸಂಜೆ ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಅದ್ದೂರಿಯ ಚಾಲನೆ ನೀಡಲಾಯಿತು.

ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸಿದರು. ಹಿರಿಯ ನೇತಾರ ರಮೇಶ್ ಚೆನ್ನಿತ್ತಲ, ಯುಡಿಎಫ್ ಸಂಚಾಲಕ ಎಂ.ಎಂ. ಹಸ್ಸನ್, ಸಂಸದರಾದ ಕೊಡಿಕುನ್ನಿಲ್ ಸುರೇಶ್, ರಮ್ಯ ಹರಿದಾಸ್, ಶಾಸಕ ಪಿ.ಸಿ. ವಿಷ್ಣುನಾಥ್, ಪಳಕುಳಂ ಮಧು, ಯಾತ್ರಾ ಸಂಯೋಜಕ ಶಾಸಕ ಟಿ.ಸಿ. ಸಿದ್ದೀಕ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಕೆ. ಫೈಸಲ್ ಮೊದಲಾದವರು ಮಾತನಾಡಿದರು. ಈ ‘ಸಮರಾಗ್ನಿ’ಯಾತ್ರೆ ಇಂದು ಕಣ್ಣೂರು ಪ್ರವೇಶಿಸಲಿದೆ. ರಾಜ್ಯದ ೧೪ ಜಿಲ್ಲೆಗಳಲ್ಲೂ ಇದು ಪರ್ಯಟನೆ ನಡೆಸಲಿದೆ. ಈ ಮಧ್ಯೆ ೩೦ ಸಮ್ಮೇಳನಗಳನ್ನೂ ನಡೆಸಲಾಗುವುದು. ಈ ಯಾತ್ರೆ ಫೆ. ೨೯ರಂದು ತಿರುವನಂತಪುರ ಪುತ್ತರಿಕಂಡ ಮೈದಾನದಲ್ಲಿ ನಡೆಯುವ ಬೃಹತ್ ಸಮ್ಮೇಳನದೊಂದಿಗೆ ಸಮಾಪ್ತಿಹೊಂದಲಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ನೇತೃತ್ವದಲ್ಲಿ ದಿಲ್ಲಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ನಡೆಸಲಾದ ಪ್ರತಿಭಟನಾ ಧರಣಿ ಮುಷ್ಕರ ಕೇವಲ ಒಂದು ರಾಜಕೀಯ ನಾಟಕವಾಗಿದೆ ಎಂದು ಸಮರಾಗ್ನಿ ಆಂದೋಲನವನ್ನು ಉದ್ಘಾಟಿಸಿ ಕೆ.ಸಿ. ವೇಣುಗೋಪಾಲ್ ಹೇಳಿದರು.

ಕೇಂದ್ರ ಸರಕಾರ ಜ್ಯಾರಿಗೊಳಿಸುತ್ತಿ ರುವ ಕ್ರಮಗಳನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಆದರೆ ಅದನ್ನು ವಿರೋಧಿಸಬೇಕಾಗಿರುವುದು ಇಂತಹ ನಾಟಕದಿಂದಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನು ಎದೆಗಾರಿಕೆಯಿಂದ ಕಾಂಗ್ರೆಸ್ ವಿರೋಧಿಸುತ್ತಾ ಬಂದಿದೆ. ಕೇಂದ್ರ ಮತ್ತು ಕೇರಳ ಸರಕಾರಗಳ ದುರಾಡಳಿತೆಯಿಂದಾಗಿ ಕೇರಳದ ಜನರು ಬೇಸತ್ತಿದ್ದಾರೆ. ಈ ಎರಡು ಸರಕಾರಗಳಿಗೆ ಜನಕಲ್ಯಾಣ ಪ್ರಧಾನ ವಿಷಯವಲ್ಲ. ಸ್ವಂತ ಪಕ್ಷಗಳ ಕಾರ್ಯಕರ್ತರ ಏಳಿಗೆಗೆ ಮಾತ್ರವೇ ಈ ಎರಡು ಸರಕಾರಗಳು ಪ್ರಧಾನ ಆಸಕ್ತಿ ವಹಿಸುತ್ತಿದೆ.

ಲೋಕಸಭಾ ಚುನಾವಣೆಯನ್ನು ಮುಂದಕ್ಕೆ ಕಂಡುಕೊಂಡು ಕಾಂಗ್ರೆಸ್ ಈ ಸಮರಾಗ್ನಿ ಆಂದೋಲನ ನಡೆಸುತ್ತಿದೆ. ಚುನಾವಣೆಯಲ್ಲಿ ಅಯೋಧ್ಯೆಯನ್ನು ಒಂದು ಚರ್ಚಾ ವಿಷಯವನ್ನಾಗಿ  ಮೂಲಕ ಮತಗಿಟ್ಟಿಸುವ ಯತ್ನ ಬಿಜೆಪಿ ನಡೆಸುತ್ತಿದೆ ಎಂದೂ ಅವರು ಆರೋಪಿಸಿದರು.

ಕೇಂದ್ರದಲ್ಲಿ ಏಕವ್ಯಕ್ತಿ ಈಗ ಗ್ಯಾರಂಟಿಯೊಂದಿಗೆ ಇಳಿದಿದ್ದಾರೆ. ಜನರನ್ನು ವಂಚಿಸಲು ಕಳೆದ ೧೦ ವರ್ಷಗಳಿಂದ ಇಂತಹ ಹಲವು ಗ್ಯಾರಂಟಿಗಳನ್ನು ನೀಡಿದ ಕೇಂದ್ರ ಸರಕಾರ, ಈಗ ಅಂತಹ ಹೊಸ ಗ್ಯಾರಂಟಿ ಗಳೊಂದಿಗೆ ರಂಗಕ್ಕಿಳಿದಿದೆ. ಆದರೆ ಇಂತಹ ವಂಚನೆಗಳ ಬಲೆಗೆ ಜನರು ಬೀಳಲಾರರೆಂದೂ ಅವರು ಹೇಳಿದರು.

Leave a Reply

Your email address will not be published. Required fields are marked *

You cannot copy content of this page