ಕಾನೂನು ಉಲ್ಲಂಘಿಸಿ ಗುಡ್ಡೆ ಅಗೆದು ಮಣ್ಣು ಸಾಗಾಟ: ಹೇರೂರಿನಲ್ಲಿದ್ದ ಗುಡ್ಡೆ ನಾಪತ್ತೆ; ಸ್ಥಳದಲ್ಲಿ ಮಳೆ ನೀರು ನಿಂತು ಭೀತಿ ಸೃಷ್ಟಿ
ಉಪ್ಪಳ: ಗುಡ್ಡೆ ಅಗೆತ, ಮಣ್ಣು ಸಾಗಾಟಕ್ಕೆ ಕಠಿಣ ನಿಯಂತ್ರಣ ಏರ್ಪಡಿಸಿರುವಾಗಲೇ ಇಲ್ಲೊಂದು ಕಡೆ ಭಾರೀ ಎತ್ತರ ಗುಡ್ಡೆಯನ್ನು ಅಗೆದು ಮಣ್ಣು ಸಾಗಾಟ ನಡೆಸಿದ್ದು, ಇದರಿಂದ ಈ ಪ್ರದೇಶ ಈಗ ಹೊಂಡವಾಗಿ ಮಾರ್ಪಾಡುಗೊಂಡಿದೆ. ಮಂಗಲ್ಪಾಡಿ ಗ್ರಾಮ ಪಂಚಾಯತ್‌ನ ೧೧ನೇ ವಾರ್ಡ್ ಹೇರೂರು ಸಮೀಪ ಬಿ.ಸಿ. ರೋಡ್ ಎಂಬಲ್ಲಿ ಗುಡ್ಡೆ ಅಗೆದು ಮಣ್ಣು ತೆಗೆಯಲಾಗಿದೆ. ಕೆಲವು ದಿನಗಳ ಹಿಂದೆ ತಂಡವೊಂದು ಗುಡ್ಡೆ ಅಗೆಯಲಿರುವ ಸಲಕರಣೆಗಳೊಂದಿಗೆ ಬಿ.ಸಿ. ರೋಡಿಗೆ ತಲುಪಿತ್ತು. ಅದು ಮಾತ್ರವಲ್ಲದೆ ಮಣ್ಣು ಅಗೆಯುವ ಯಂತ್ರಗಳು, ಲಾರಿಗಳು ಕೂಡ ತಲುಪಿ ಕೆಲಸ ಆರಂಭಿಸಿದ್ದವು. ಗುಡ್ಡೆ ಅಗೆದು ವ್ಯಾಪಕವಾಗಿ ಮಣ್ಣು ಸಾಗಿಸಲಾಗಿದೆ. ಆದರೆ ಈ ಬಗ್ಗೆ ಪ್ರಶ್ನಿಸಲು ಅಥವಾ ಪರಿಶೀಲಿಸಲು ಯಾರೂ ಅತ್ತ ತಲುಪದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಿಗೆ ಅದನ್ನು ನೋಡಿ ನಿಲ್ಲುವುದಷ್ಟೇ ಸಾಧ್ಯವಾಗಿದೆ.
ಒಮ್ಮೆ ಕಾಮಗಾರಿಯನ್ನು ನಿಲ್ಲಿಸಿದ ತಂಡ ಪುನಃ ತಲುಪಿ ತನ್ನ ಚಟುವಟಿಕೆಯನ್ನು ಆರಂಭಿಸಿದೆ. ಇದರ ಪರಿಣಾಮ ೩೫ ಅಡಿಗಳಷ್ಟು ಆಳದಲ್ಲಿ ಗುಡ್ಡೆಯನ್ನು ಅಗೆದು ಮಣ್ಣು ಸಾಗಿಸಲಾಗಿದೆ. ಇದರ ಪರಿಣಾಮವಾಗಿ ೩ ಎಕರೆ ಸ್ಥಳದಲ್ಲಿದ್ದ ಗುಡ್ಡೆ ಈಗ ನಾಪತ್ತೆಯಾಗಿದೆ. ಗುಡ್ಡೆಯನ್ನು ಅಗೆದು ಇನ್ನಷ್ಟು ಆಳ ಮಾಡಲಾಗುತ್ತಿದೆಯೆಂದು ತಿಳಿದು ಸ್ಥಳೀಯರು ಅಲ್ಲಿಗೆ ತಲುಪಿ ಕೆಲಸಕ್ಕೆ ತಡೆಯೊಡ್ಡಿದ್ದಾರೆ. ಅಲ್ಲದೆ ಗ್ರಾಮಾಧಿಕಾರಿ, ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ವಿಷಯ ತಿಳಿಸಿ ಗುಡ್ಡೆ ಅಗೆಯುವುದನ್ನು ತಡೆದು ನಾಡನ್ನು ರಕ್ಷಿಸುವಂತೆ ವಿನಂತಿಸಿದ್ದಾರೆ. ಇದೇ ವೇಳೆ ಬಿ.ಸಿ. ರೋಡ್‌ನಲ್ಲಿ ಅಂತಹ ಒಂದು ಕಾಮಗಾರಿ ನಡೆದ ಬಗ್ಗೆ ತಮ್ಮ ಅರಿವಿಗೆ ಬಂದೇ ಇಲ್ಲವೆಂದು ಗ್ರಾಮಾಧಿಕಾರಿ ತಿಳಿಸಿರುವುದಾಗಿ ನಾಗರಿಕರು ಹೇಳುತ್ತಿದ್ದಾರೆ. ಆ ಸ್ಥಳದಲ್ಲಿ ವಾಸವಿಲ್ಲದ ಮೊಹಮ್ಮದ್ ಶಾಫಿ ಎಂಬವರು ಸ್ಥಳದ ಮಾಲಕನೆಂದು ನಾಗರಿಕರು ಹೇಳುತ್ತಿದ್ದಾರೆ. ಮೊನ್ನೆ ಸುರಿದ ಧಾರಾಕಾರ ಮಳೆಯ ನೀರು ಮಣ್ಣು ತೆಗೆದ ಸ್ಥಳದಲ್ಲಿ ತುಂಬಿಕೊಂಡಿದ್ದು, ಆ ಪ್ರದೇಶದಲ್ಲಿ ಭೂ ಕುಸಿತ ಉಂಟಾಗುವುದೇ ಎಂಬ ಭಯ ಸ್ಥಳೀಯರಲ್ಲಿ ಉಂಟಾಗಿದೆ. ಗುಡ್ಡೆ ಅಗೆಯುವುದು, ಮಣ್ಣು ಸಾಗಿಸುವುದಕ್ಕೆ ನಿಯಂತ್ರಣ ಏರ್ಪಡಿಸಿರುವುದು ಬಡವರಿಗೆ ಮಾತ್ರವಾಗಿದೆಯೇ ಎಂಬ ಸಂಶಯ ಹುಟ್ಟಿಕೊಂಡಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಪ್ರಕೃತಿಯನ್ನು ನಾಶಗೊಳಿಸುವ ದಂಧೆ ನಡೆಯುತ್ತಿರು ವಾಗ ಸಂಬಂಧಪಟ್ಟ ಅಧಿಕಾರಿಗಳು, ರಾಜಕೀಯ ನೇತಾರರು, ಜನಪ್ರತಿನಿಧಿ ಗಳು ಮೌನವಾಗಿ ನಿಂತಿರುವುದರ ಬಗ್ಗೆ ನಾಗರಿಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.