ಕಾರಿನಲ್ಲಿ ಎಂಡಿಎಂಎ ಸಾಗಾಟ : ಇನ್ನೋರ್ವ ಆರೋಪಿ ತಲಪ್ಪಾಡಿಯಿಂದ ಸೆರೆ
ಕಾಸರಗೋಡು: ಕಾರಿನ ಬೋನೆಟ್‌ನಲ್ಲಿ ಬಚ್ಚಿಟ್ಟು 5೦ ಗ್ರಾಂ ಎಂಡಿಎಂಎ ಸಾಗಿಸಿದ ಪ್ರಕರಣದ ಇನ್ನೋರ್ವ ಆರೋಪಿಯನ್ನು ಮೇಲ್ಪರಂಬ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎ. ಸಂತೋಷ್ ಕುಮಾರ್ ನೇತೃತ್ವದ ಪೊಲೀಸರು ತಲಪಾಡಿಯಿಂದ ಸೆರೆಹಿಡಿದಿದ್ದಾರೆ.
ಕುಂಬಳೆ ಶೇಡಿಕಾವು ವಡಗರೆ ಕಾಂಪೌಂಡ್‌ನ ಮೊಹಮ್ಮದ್ ಅಶ್ರಫ್ (25) ಬಂಧಿತ ಆರೋಪಿ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿರುವ ಡಿಸ್ಟ್ರಿಕ್ಟ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಆಕ್ಷನ್ ಫೋರ್ಸ್ ಮತ್ತು ಮೇಲ್ಪರಂಬ ಪೊಲೀಸರು ಕಳೆದ ಡಿಸೆಂಬರ್ 15ರಂದು ಪೊಯಿನಾಚಿ ಪೇಟೆಯಲ್ಲಿ ಸಂಯುಕ್ತವಾಗಿ ನಡೆಸಿದ ಕಾರ್ಯಾ ಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಮಾದಕವಸ್ತುವಾದ 50 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದರು. ಅದಕ್ಕೆ ಸಂಬಂಧಿಸಿ ಆ ಕಾರಿನಲ್ಲಿದ್ದ ಮೂವರನ್ನು ಪೊಲೀಸರು ಅಂದು ಬಂಧಿಸಿದ್ದರು. ಮಾದಕದ್ರವ್ಯ ದೊಂ ದಿಗೆ ಈ ಕಾರು ಸುಳ್ಯದಿಂದ ಬಂದಡ್ಕ ಮಾರ್ಗವಾಗಿ ಪೊಯಿನಾಚಿಗೆ ಬರುತ್ತಿದ್ದ ವೇಳೆ ಪೊಯಿನಾಚಿಯಲ್ಲಿ ಪೊಲೀಸರು ಅದನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿತ್ತು. ಆ ವೇಳೆ ಆ ಕಾರಿನಲ್ಲಿದ್ದ ಆರೋಪಿ ಮೊಹಮ್ಮದ್ ಅಶ್ರಫ್ ಕಾರಿನಿಂದ ಇಳಿದು ಪರಾರಿಯಾಗಿದ್ದನು. ಬಳಿಕ ಆತನನ್ನು ತಲಪ್ಪಾಡಿಯಿಂದ ಪೊಲೀಸರು ಬಂಧಿಸಿ ನಂತರ ನ್ಯಾಯಾಲಯದಲ್ಲಿ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.